ಮೈಸೂರು: ರಾಜ್ಯದಲ್ಲಿ ಒಂದು ದಿನಕ್ಕೆ 100 ಕೋಟಿ ರೂಪಾಯಿ ಲೂಟಿಯಾಗುತ್ತಿದೆ. ಮುಖ್ಯಮಂತ್ರಿ ಕಚೇರಿಯಲ್ಲಿಯೇ ಎಲ್ಲಾ ವ್ಯವಹಾರ ನಡೆಯುತ್ತದೆ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಬಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅಚ್ಚರಿಯ ಹೇಳಿಕೆ ನೀಡುವ ಮೂಲಕ ಗಂಭೀರ ಆರೋಪವನ್ನು ಮಾಡಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ಬಳಿಕ ಮಾತನಾಡಿ, ರಾಜ್ಯದ ಬೊಕ್ಕಸ ಲೂಟಿಯಾಗುತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಉಳಿಯಬೇಕಾದರೆ ಬದಲಾವಣೆ ಆಗಬೇಕಿದೆ. ವಿಪಕ್ಷದವರಿಗೆ ದುಡ್ಡು ಹೋಗುತ್ತಿದೆ. ಈಗಾಗಿ ಸುಮ್ಮನಿದ್ದಾರೆ ಎಂದು ವಿಪಕ್ಷ ನಾಯಕರ ವಿರುದ್ಧವು ಕಿಡಿಕಾರಿದರು.
ಮಠಗಳು ಧರ್ಮಕಾರ್ಯಗಳನ್ನು ಮಾಡಬೇಕು.ಹೊರತು ರಾಜಕೀಯ ಮಾಡಬಾರದು. ಇನ್ನು ವಿಪಕ್ಷದವರು ಅವ್ಯವಹಾರದಲ್ಲಿ ಪಾಲುದಾರರಾಗಿದ್ದಾರೆ. ಲಿಂಗಾಯತರು ತಲೆತಗ್ಗಿಸುವ ರೀತಿಯಲ್ಲಿ ರಾಜ್ಯದಲ್ಲಿ ಆಡಳಿತ ನಡೆಯುತ್ತಿದೆ. ಮಠಾಧೀಶರಿಗೆ ದಕ್ಷಿಣೆ ಕೊಟ್ಟಿದ್ದಕ್ಕೆ ಅವರು ಮುಖ್ಯಮಂತ್ರಿ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಸಚಿವ ಶ್ರೀರಾಮುಲು ಅವರನ್ನು ಮುಗಿಸಲು ಪ್ರಯತ್ನಿಸಲಾಗುತ್ತಿದೆ. ಲಿಂಗಾಯತರು ಮತ್ತು ಕುರುಬರ ನಾಯಕರನ್ನು ಬದಿಗೆ ಸರಿಸಲಾಗುತ್ತಿದೆ. ಕಾಂಗ್ರೆಸ್ ನವರು ಮುಖ್ಯಮಂತ್ರಿ ಯಡಿಯೂರಪ್ಪನವರ ಎಂಜಲು ತಿಂದು ಬದುಕುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು.