ಮಂಡ್ಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾರ್ಯಕರ್ತನ ತಲೆಗೆ ಹೊಡೆದ ವಿಷಯ ಈಗ ಭಾರಿ ಚರ್ಚೆ ಆಗುತ್ತಿದೆ. ಆದರೆ ಅವರು ಹೊಡೆದಿರುವುದು ಕಾಗ್ರೆಸ್ ಕಾರ್ಯಕರ್ತನಿಗಲ್ಲ, ಹೊಡೆಸಿಕೊಂಡವರು ಓರ್ವ ಜೆಡಿಎಸ್ ಕಾರ್ಯಕರ್ತ.
ಈ ವಿಷಯವನ್ನು ಜೆಡಿಎಸ್ ಕಾರ್ಯಕರ್ತನೇ ಬಹಿರಂಗ ಪಡಿಸಿದ್ದಾರೆ. ಹೌದು! ನಾನು ಅಪ್ಪಟ ಜೆಡಿಎಸ್ ಕಾರ್ಯಕರ್ತ ನಮ್ಮ ಜನಾಂಗದ ನಾಯಕ ಡಿ.ಕೆ. ಶಿವಕುಮಾರ್ ಎಂದು ಅವರನ್ನು ನೋಡಲು ಹೋಗಿದ್ದೆ. ಆದರೆ ಡಿಕೆಶಿ ಅವರು ಈ ರೀತಿ ವರ್ತನೆ ಮಾಡಿದ್ದು ಸರಿಯಲ್ಲ ಎಂದು ಡಿಕೆಶಿಯಿಂದ ಏಟು ತಿಂದ ತೊರೆಬೊಮ್ಮನಹಳ್ಳಿಯ ಉಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುವ ಮಾಜಿ ಸಂಸದ ಜಿ.ಮಾದೇಗೌಡ ಅವರನ್ನು ನೋಡಲು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಗೆ ಶುಕ್ರವಾರ ಹೋಗಿದ್ದ ಶಿವಕುಮಾರ್ ಓರ್ವ ವ್ಯಕ್ತಿಯ ತಲೆಗೆ ಹೊಡೆದಿದ್ದರು. ಹೊಡೆದಿದ್ದ ಆ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಇನ್ನು ಈ ಡಿಕೆಶಿಯಿಂದ ಏಟು ತಿಂದಿರುವ ಉಮೇಶ್ ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದು, ನಾನು ಕಾಂಗ್ರೆಸ್ ಕಾರ್ಯಕರ್ತನಲ್ಲ. ನಾನು ಅಪ್ಪಟ ಜೆಡಿಎಸ್ ಕಾರ್ಯಕರ್ತ ಹಾಗೂ ಮದ್ದೂರು ಶಾಸಕ ತಮ್ಮಣ್ಣ ಅವರ ಅಭಿಮಾನಿಯಾಗಿದ್ದೇನೆ ಎಂದು ತಿಳಿಸಿದರು.
ಶಿವಕುಮಾರ್ ಅವರು ನಮ್ಮ ಜನಾಂಗದ ನಾಯಕ ಹಾಗೂ ನಮ್ಮ ಸಂಬಂಧಿ ಎಂಬ ಅಭಿಮಾನಕ್ಕೆ ನಾನು ಅವರನ್ನು ನೋಡಲು ಹೋಗಿದ್ದೆ. ಈ ವೇಳೆ ಅವರ ಜೊತೆ ಫೋಟೋ ತೆಗೆಸಿಕೊಳ್ಳಬೇಕು ಅನ್ನಿಸಿತ್ತು, ಆ ಕಾರಣಕ್ಕೆ ನಾನು ಕೈಯನ್ನು ಸ್ವಲ್ಪ ಪಕ್ಕಕ್ಕೆ ಸರಿಸಿದೆ. ಈ ವೇಳೆ ಕೈ ಬೆನ್ನಿನ ಭಾಗಕ್ಕೆ ತಗುಲಿದೆ, ಅದೇ ಕಾರಣಕ್ಕೆ ಡಿಕೆಶಿ ಅವರು ಹೊಡೆದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿಕೆಶಿ ಅವರು ಈ ರೀತಿ ವರ್ತನೆ ಮಾಡಿರುವುದು ಸರಿಯಲ್ಲ. ಅವರ ಘನತೆಗೆ ಈ ವರ್ತನೆ ಶೋಭೆ ತರುವುದಿಲ್ಲ. ಅವರ ಜಾಗದಲ್ಲಿ ಬೇರೆ ಯಾರಿದ್ದರೂ ಪ್ರತಿಭಟನೆ ಮಾಡುತ್ತಿದ್ದೆ, ಅವರ ಸ್ಥಾನಕ್ಕೆ ಗೌರವ ಕೊಟ್ಟು ನಾನು ಸುಮ್ಮನೆ ಇದ್ದೇನೆ ಎಂದು ಉಮೇಶ್ ಹೇಳಿದರು.
ಇನ್ನು ಮುಂದಿನ ದಿನಗಳಲ್ಲಿ ಅವರ ವರ್ತನೆಯನ್ನು ಬದಲು ಮಾಡಿಕೊಳ್ಳಲಿ, ಅಭಿಮಾನಿಗಳು ಹಾಗೂ ಅವರ ಪಕ್ಷದ ಕಾರ್ಯಕರ್ತರ ಮೇಲೆ ಈ ರೀತಿಯ ವರ್ತನೆ ತೋರಬಾರದು ಇದು ಒಬ್ಬ ನಾಯಕನಲ್ಲಿ ಇರುವ ಸಣ್ಣತನವನ್ನು ತೋರಿಸುತ್ತಿದೆ. ಅದನ್ನು ಬಿಟ್ಟು ಒಬ್ಬ ನಾಯಕ ನನಗೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ವರ್ತಿಸಬೇಕು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.