ಬೆಂಗಳೂರು: ಹಗಲಿರುಳು ಎನ್ನದೆ ದುಡಿಯುತ್ತಿರುವ ಸಾರಿಗೆ ನೌಕರರ ಸಮಸ್ಯೆ ಆಲಿಸಿ ಪರಿಹರಿಸಬೇಕಾದವರೆ ಕಾಡುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆಯೇ ಸರಿ.
ಹೌದು! ಮಾಡಬಾರದ ತಪ್ಪು ಮಾಡಿದ್ದಾರೆ ಎಂಬಂತೆ ರಾಜ್ಯ ಸರ್ಕಾರದ ಸಿಎಂ ಮತ್ತು ಸಚಿವರು ಕೂಡ ಸಾರಿಗೆ ನೌಕರರ ವಿರುದ್ಧ ಸಿಡಿದೆದ್ದು ಸಿಕ್ಕಸಿಕ್ಕಂತೆ ಪ್ರಕರಣಗಳನ್ನು ದಾಖಲಿಸಿದ್ದೇ ದಾಖಲಿಸಿದ್ದು. ಒಬ್ಬ ಸರ್ಕಾರಿ ಅಥವಾ ನಿಗಮ ಮಂಡಳಿಗಳ ನೌಕರರು ಒಂದು ವೇಳೆ ತಪ್ಪು ಮಾಡಿದ್ದರೆ ಅವರಿಗೆ ಕಾನೂನಿನ ಪ್ರಕಾರ ನೋಟಿಸ್ ನೀಡಿ ಆ ನೋಟಿಸ್‌ಗೆ ಅವರಿಂದ ಲಿಖಿತವಾದ ಉತ್ತರ ಪಡೆದು ಆ ಉತ್ತರ ಸಮಂಜಸವಲ್ಲ ಎಂದು ತನಿಖಾಧಿಕಾರಿಗೆ ಅನಿಸಿ ಆ ನೌಕರ ತಪ್ಪು ಮಾಡಿದ್ದಾನೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದರೆ ಅಂಥ ನೌಕರರನ್ನು ಅಮಾನತಿನಲ್ಲಿ ಇಟ್ಟು ಮುಂದಿನ ವಿಚಾರಣೆ ನಡೆಸಬೇಕು.
ಆ ನಂತರ ಆ ನೌಕರರು ತಪ್ಪೆಸಗಿರುವುದು ಸಾಬೀತಾದರೆ ನಂತರ ವಜಾ ಮಾಡಬೇಕು. ಇದಾವುದು ಇಲ್ಲದೆ 1.30 ಲಕ್ಷ ನೌಕರರ ಪೈಕಿ ಕೇವಲ 7-8 ಸಾವಿರ ನೌಕರರನ್ನು ಅಮಾನತು, ವರ್ಗಾವಣೆ ಮತ್ತು ವಜಾ ಮಾಡಿರುವುದು ಕಾನೂನಿನ ಉಲ್ಲಂಘನೆ ಆದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಇಲ್ಲಿ 1.30 ಲಕ್ಷ ನೌಕರರಲ್ಲಿ ಕೇವಲ ಬೆರಳೆಣಿಕೆಯಷು ಮಂದಿ ಮುಷ್ಕರ ಸಮಯದಲ್ಲಿ ಬಸ್ ಓಡಿಸಿದ್ದಾರೆ. ಅಂದರೆ ಹೆಚ್ಚೆಂದರೆ 50ರಿಂದ 100 ಮಂದಿ ಅಷ್ಟೇ ಬಸ್ ಚಾಲನೆ ಮಾಡಿದ್ದಾರೆ ಎಂಬುವುದು ತಿಳಿದು ಬಂದಿದೆ. ಆದರೆ ತಪ್ಪು ಮಾಡಿದ್ದಾರೆ ಎಂದು ಶಿಕ್ಷೆ ಕೊಟ್ಟಿರುವುದು ಒಂದು ತಿಂಗಳೋ ಇಲ್ಲ 6 ತಿಂಗಳಿಗೋ ನಿವೃತ್ತರಾಗುವ ನೌಕರರಿಗೆ ಮತ್ತು 50 ವರ್ಷ ಮೀರಿದ ನೌಕರರು ಸೇರಿ ಬಹುತೇಕ ಅಮಾಯಕರಿಗೆ.
ಅಂದರೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ನೌಕರರ ಮೂಲಭೂತ ಹಕ್ಕನ್ನೇ ಕಸಿಯುವ ರೀತಿ ಕಾನೂನನ್ನೇ ಗಾಳಿ ತೂರಿ ಮನ ಬಂದಂತೆ ಅಧಿಕಾರಿಗಳು ಅಮಾಯಕರ ಮೇಲೆ ಏಕಾಏಕಿ ಅಮಾನತು, ವರ್ಗಾವಣೆ ಮತ್ತು ವಜಾದಂಥ ಶಿಕ್ಷೆ ಕೊಟ್ಟಿರುವುದು ಸರಿಯೇ?
ಅಧಿಕಾರಿಗಳು ಮುಷ್ಕರ ಸಮಯದಲ್ಲಿ ತೆಗೆದುಕೊಂಡಿರುವ ತೀರ್ಮಾನಗಳ ವಿರುದ್ಧ ಕಾನೂನಿನ ಮೊರೆ ಹೋದರೆ ನೌಕರರ ಪರ ತೀರ್ಪು ಬರುವುದು ಶೇ.100ರಷ್ಟು ಖಚಿತ ಎಂದು ಹೇಳಲಾಗುತ್ತಿದೆ. ಕಾರಣ ಅಧಿಕಾರಿಗಳು ಕಾರ್ಮಿಕ ಕಾನೂನಿನಡಿ ನಡೆದುಕೊಳ್ಳದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅಂದರೆ, ಇವರು ಯಾವುದೇ ನೋಟಿಸ್ ಇತರ ಎಚ್ಚರಿಕೆ ಪತ್ರವನ್ನು ನೀಡದೇ ಏಕಾಏಕಿ ಅಮಾನತು, ವರ್ಗಾವಣೆ ಮತ್ತು ವಜಾ ಮಾಡಲಾಗಿದೆ ಎಂದು ನೋಟಿಸ್ ಬೋರ್ಡ್‌ಗಳಲ್ಲಿ ಹಾಕುವ ಮೂಲಕ ಶಿಕ್ಷೆ ನೀಡಿದ್ದಾರೆ.
ಮುಷ್ಕರಕ್ಕೆ ಬೆಂಬಲ ನೀಡಿದ ಶೇ.99ರಷ್ಟು ನೌಕರರ ಪೈಕಿ ಕೇವಲ 7-8 ಸಾವಿರ ನೌಕರರಿಗಷ್ಟೇ ಶಿಕ್ಷೆ ನೀಡಿರುವುದನ್ನು ನೋಡಿದರೆ ಸಾರಿಗೆ ನಿಗಮಗಳಲ್ಲಿ ವಿಶೇಷವಾದ ಕಾನೂನು ರೂಪಿಸಿಕೊಂಡಂತೆ ಕಾಣುತ್ತಿದೆ. ಇದಕ್ಕೆ ಅಮಾನತು ಮಾಡಿರುವ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಉತ್ತರ ನೀಡಬೇಕಿದ್ದು, ಅದಕ್ಕೆ ಇಂದಿನಿಂದಲೇ ಅಧಿಕಾರಿಗಳು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಉತ್ತಮ ಎಂದು ಹಿರಿಯ ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಇದುವರೆಗೂ ಯಾವುದೇ ಒಂದೇ ಒಂದು ತಪ್ಪು ಮಾಡದವರನ್ನು ಅಮಾನತು, ವರ್ಗಾವಣೆ ಮತ್ತು ವಜಾ ಮಾಡಲಾಗಿದೆ. 50 ವರ್ಷ ಮೀರಿದ ಅಮಾಯಕ ನೌಕರರನ್ನು ಪ್ರಮುಖವಾಗಿ ಟಾರ್ಗೆಟ್ ಮಾಡಲಾಗಿದೆ. ಅಂದರೆ ಆ ನೌಕರರಿಗೆ 50 ವರ್ಷ ವಯಸ್ಸಾಗಿರುವುದೇ ತಪ್ಪಾ? ಸಂಸ್ಥೆಯಲ್ಲಿ ನಿಷ್ಠೆಯಿಂದ 20-30 ವರ್ಷ ದುಡಿದವರಿಗೆ ಈ ರೀತಿ ಶಿಕ್ಷೆ ಕೊಟ್ಟಿರುವುದು ಯಾವ ನ್ಯಾಯ ಎಂದು ಸಾರ್ವಜನಿಕ ವಲಯದಲ್ಲೂ ಕೇಳಿ ಬರುತ್ತಿದೆ.