ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ತತ್ತರಿಸಿರುವ ಬೆಂಗಳೂರಿನ ನಾಗರಿಕರಿಗೆ ಆಸ್ತಿ ತೆರಿಗೆ ಪಾವತಿಸಲು ಹೆಚ್ಚಿನ ಕಾಲಾವಕಾಶ ನೀಡುವ ಬದಲು ಆಸ್ತಿಯನ್ನು ಸೀಲ್ ಮಾಡಲು ಬಿಬಿಎಂಪಿ ಹೊರಟಿರುವುದು ಗಾಯದ ಮೇಲೆ ಬರೆ ಎಳೆಯುವಂತಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿಯ ರಾಜ್ಯ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ, “ರಾಜ್ಯದ ಇತರೆ ಭಾಗಗಳಿಗಿಂತ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪರಿಣಾಮ ಭೀಕರವಾಗಿತ್ತು. ಮೊದಲ ಹಾಗೂ ಎರಡನೇ ಅಲೆಯ ಲಾಕ್‌ಡೌನ್‌ನಿಂದಾಗಿ ಬೆಂಗಳೂರು ತತ್ತರಿಸಿಹೋಗಿದೆ.
ಲಾಕ್‌ಡೌನ್ ಅಂತ್ಯವಾಗಿದ್ದರೂ ಬೆಂಗಳೂರಿಗರ ಆರ್ಥಿಕ ಸ್ಥಿತಿ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಹೀಗಿರುವ ಆಸ್ತಿ ತೆರಿಗೆ ಪಾವತಿಸದವರ ಆಸ್ತಿಗಳನ್ನು ಸೀಲ್ ಮಾಡುವಂತೆ ಮುಖ್ಯ ಆಯುಕ್ತ ಗೌರವ್ ಗುಪ್ತ ಆದೇಶಿಸಿರುವುದು ಖಂಡನೀಯ” ಎಂದು ಹೇಳಿದರು.
ದೀರ್ಘಕಾಲದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಿ. ಆದರೆ ಕೋವಿಡ್ ಬಂದ ನಂತರದ ಅವಧಿಯಲ್ಲಿನ ಬಾಕಿಯನ್ನು ಪಾವತಿಸದವರಿಗೆ ಕಾಲಾವಕಾಶ ನೀಡಬೇಕು. ಕಮರ್ಷಿಯಲ್ ಆಸ್ತಿ ತೆರಿಗೆ ಪಾವತಿಸಲು ಆರು ತಿಂಗಳು ಹಾಗೂ ರೆಸಿಡೆನ್ಸಿಯಲ್ ಆಸ್ತಿ ತೆರಿಗೆ ಪಾವತಿಸಲು ಒಂದು ವರ್ಷ ಕಾಲಾವಕಾಶ ನೀಡಬೇಕು.
ಕಂತಿನ ರೂಪದಲ್ಲಿ ರೆಸಿಡೆನ್ಸಿಯಲ್ ಆಸ್ತಿ ತೆರಿಗೆಯನ್ನು ಪಾವತಿಸಲು ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಬಿಬಿಎಂಪಿಯ ನಡೆ ಖಂಡಿಸಿ ಬೆಂಗಳೂರಿಗರ ಪರವಾಗಿ ಆಮ್ ಆದ್ಮಿ ಪಾರ್ಟಿ ಹೋರಾಟ ಮಾಡಲಿದೆ ಎಂದು ರಾಜಶೇಖರ ದೊಡ್ಡಣ್ಣ ಎಚ್ಚರಿಕೆ ನೀಡಿದರು.
ವ್ಯಾಪಾರಸ್ಥರು, ಉದ್ದಿಮೆದಾರರು, ಸಣ್ಣಸಣ್ಣ ಕಂಪನಿಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಎಲ್ಲಾ ವರ್ಗಗಳ ಜನರು ಮನೆ, ನಿವೇಶನ ಮುಂತಾದ ಆಸ್ತಿ ಹೊಂದಿದ್ದಾರೆ. ಲಾಕ್‌ಡೌನ್‌ನಿಂದಾಗಿ ಹಲವು ತಿಂಗಳು ದುಡಿಮೆಯಿಲ್ಲದೇ ಕಂಗೆಟ್ಟಿದ್ದಾರೆ.
ಸುಮಾರು ಹತ್ತು ಲಕ್ಷ ಬಾಡಿಗೆ ಮನೆಗಳು ಖಾಲಿಯಾಗಿ ಮನೆ ಮಾಲೀಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್‌ರವರೇ ಹೇಳಿದ್ದಾರೆ. ಇವೆಲ್ಲ ತಿಳಿದಿದ್ದರೂ ಆಸ್ತಿ ತೆರಿಗೆ ಪಾವತಿದಾರರ ಮೇಲೆ ಬಿಬಿಎಂಪಿಯು ದರ್ಪ ತೋರುತ್ತಿರುವುದು ಅಮಾನವೀಯ. ತೆರಿಗೆ ವಸೂಲಿ ಮಾಡುವುದೊಂದನ್ನೇ ಗುರಿ ಮಾಡಿಕೊಳ್ಳುವ ಬದಲು ಮಾನವೀಯತೆಯನ್ನು ಬಿಬಿಎಂಪಿ ಕಲಿಯಬೇಕಿದೆ ಎಂದು ರಾಜಶೇಖರ ದೊಡ್ಡಣ್ಣ ಹೇಳಿದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಎಎಪಿ ನಾಯಕಿ ಪುಷ್ಪಾ ಉಪಸ್ಥಿತರಿದ್ದರು.