NEWSದೇಶ-ವಿದೇಶರಾಜಕೀಯಶಿಕ್ಷಣ-

ಅಜ್ಞಾನ ಆರಾಧಿಸುವ ಮೂರ್ಖರ ಮಾತು ಕೇಳಿ ಶಿಕ್ಷಣವನ್ನು ಕೊಲ್ಲಬಾರದು: ಮಾಜಿ ಸಿಎಂ ಸಿದ್ದರಾಮಯ್ಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ-2020ರ ಕುರಿತಾದ ಆದೇಶವನ್ನು ಈ ಕ್ಷಣವೇ ಹಿಂಪಡೆದು ವಿಸ್ತೃತ ಚರ್ಚೆ ನಡೆಸಿದ ನಂತರ ಅನುಷ್ಠಾನಗೊಳಿಸುವ ಕುರಿತು ತೀರ್ಮಾನಿಸಬೇಕೆಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಯಾವುದೇ ಚರ್ಚೆ ನಡೆಸದೆ ಆದೇಶ ಹೊರಡಿಸಿರುವುದು ಸರ್ವಾಧಿಕಾರಿ ನಿಲುವು, ದೇಶದ ಒಕ್ಕೂಟ ತತ್ವಕ್ಕೆ ಮಾಡಿರುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಾಡಿನ ಶಿಕ್ಷಣ ತಜ್ಞರು, ಉಪನ್ಯಾಸಕರು, ಹಿರಿಯರು ಮತ್ತು ವಿಪಕ್ಷಗಳ ಮುಖಂಡರು ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ರಾಜ್ಯದ ಮೇಲೆ ಹೇರಬೇಡಿ, ಸಂಬಂಧಿಸಿದ ವಲಯಗಳ ಜನರ ಜತೆಗೆ ವಿಸ್ತೃತ ಚರ್ಚೆ ನಡೆಸಿ, ಸಾಧಕ ಬಾಧಕಗಳ ಪರಿಶೀಲಿಸಿದ ನಂತರ ತೀರ್ಮಾನಿಸಿ ಎಂದು‌ ಹೇಳಿದ್ದೆವು.

ಹಾಗೆ ಮಾಡದೆ ಈ ಅನಾಹುತಕಾರಿ ನೀತಿಯನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸಲು ಆದೇಶ ಹೊರಡಿಸಲಾಗಿದೆ. ಈ ಆದೇಶದಲ್ಲಿ ಹಲವಾರು ಅಪಾಯಕಾರಿಯಾದ ಅಂಶಗಳಿವೆ. ಬಡವರ, ಮಧ್ಯಮ ವರ್ಗದವರ ಮಕ್ಕಳು ಗುಣಮಟ್ಟದ ಮತ್ತು ಉನ್ನತ ಶಿಕ್ಷಣ ಪಡೆಯುವ ಕನಸಿಗೆ ನೇರವಾಗಿ ಬೆಂಕಿ ಇಡುವ ಪ್ರಕ್ರಿಯೆಯ ಭಾಗವಾಗಿ ಈ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಹೊರಡಲಾಗಿದೆ ಎಂದು ಆರೋಪಿಸಿದ್ದಾರೆ.

ಆದೇಶದ ಪ್ರಮುಖ ಸಮಸ್ಯೆಗಳು
ಕನ್ನಡ ಭಾಷಾ ವಿಷಯವನ್ನು ಕೇವಲ ಎರಡು ಸೆಮಿಸ್ಟರ್‌ಗಳಿಗೆ ಅಂದರೆ ಒಂದು ವರ್ಷಕ್ಕೆ ಮಾತ್ರ ಕಲಿಸುವುದಾಗಿ ಹಿಂದೆ ಹೇಳಿದ್ದರು. ರಾಜ್ಯದ ವಿವಿಧ ವಲಯಗಳಿಂದ ಪ್ರಬಲ ಪ್ರತಿರೋಧ ಬಂದ ಮೇಲೆ ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ್‌ ನಾರಾಯಣ್ ಅವರು ಈ ಸಮಸ್ಯೆಯನ್ನು ಸರಿಪಡಿಸುವುದಾಗಿ ಹೇಳಿಕೆ ಕೊಟ್ಟಿದ್ದರು.

ಆದರೆ ಸರ್ಕಾರ ಶನಿವಾರ (ಆ.7) ಹೊರಡಿಸಿರುವ ಆದೇಶದಲ್ಲಿ ಅದರ ಕುರಿತು ಸ್ಪಷ್ಟತೆ ಇಲ್ಲ. ಒಂದು ವರ್ಷಕ್ಕೆ ಸೀಮಿತಗೊಳಿಸುವರೊ ಇಲ್ಲ ಹಿಂದೆ ಇದ್ದಂತೆ ಎರಡು ವರ್ಷಗಳೂ ಕಲಿಸುವರೊ ಅಥವಾ ನಾವು ಒತ್ತಾಯ ಮಾಡಿದಂತೆ ಧಾರವಾಡ ಮುಂತಾದ ವಿವಿಗಳಲ್ಲಿರುವಂತೆ ಮೂರೂ ವರ್ಷಗಳಿಗೆ ಕಲಿಸಲಾಗುವುದೊ ಎಂಬುದರ ಬಗ್ಗೆ ಸರ್ಕಾರದ ಆದೇಶ ಮೌನವಾಗಿದೆ.

ಈ ಆದೇಶದಲ್ಲಿರುವ ಅತ್ಯಂತ ಕೆಟ್ಟ ಮತ್ತು ಅಪಾಯಕಾರಿಯಾದ ಹಾಗೂ ಜಗತ್ತಿನ ಯಾವ ದೇಶಗಳಲ್ಲೂ ಇಲ್ಲದ ಕಲಿಕಾ ಕ್ರಮವನ್ನು ಈ ಆದೇಶದಲ್ಲಿ ಪ್ರಸ್ತಾಪಿಸಿದ್ದಾರೆ. ಅದರ ಪ್ರಕಾರ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಯು ಶೇ. 40 ರಷ್ಟು ಕ್ರೆಡಿಟ್ಟುಗಳನ್ನು/ ಅಂಕಗಳನ್ನು/ ಆನ್ ಲೈನ್ ಮೂಲಕ ಕೇಳಿ ಪಡೆಯಬಹುದು. ತರಗತಿಗಳಿಗೆ ಹಾಜರಾಗಬೇಕಾದ ಅಗತ್ಯವಿಲ್ಲ.

ಯಾವುದೇ ವಿಶ್ವವಿದ್ಯಾಲಯದಿಂದ ಶೇ.50 ರಷ್ಟು ಅಂಕ /ಕ್ರೆಡಿಟ್ಟುಗಳನ್ನು‌ ಪಡೆಯಬೇಕು. ಇದರಿಂದಾಗಿ ಪ್ರಾಕ್ಟಿಕಲ್ ತರಗತಿಗಳನ್ನು ಹೊರತುಪಡಿಸಿ ಇನ್ನುಳಿದಂತೆ ತರಗತಿಗಳಿಗೆ ಹಾಜರಾಗುವ ಅಗತ್ಯವಿಲ್ಲ. (ಈಗಾಗಲೆ ಉಪನ್ಯಾಸಕರಿಂದ ಪಠ್ಯಗಳನ್ನು ರೆಕಾರ್ಡ್ ಮಾಡಿಸಲಾಗಿದೆ). ಈ ನೀತಿಯ ಪ್ರಕಾರ ವಿಶ್ವ ವಿದ್ಯಾಲಯಗಳನ್ನು ದೂರ ಶಿಕ್ಷಣ ಕೇಂದ್ರಗಳಂತೆ ಮಾಡಲಾಗುತ್ತಿದೆ.

ಆ ಮೂಲಕ ಅನೇಕ ಸರ್ಟಿಫಿಕೇಟ್ ಕೋರ್ಸ್ ಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ, ನಿಧಾನಕ್ಕೆ ಸರ್ಕಾರಿ ವಿವಿಗಳನ್ನು ಮುಚ್ಚಿ ಖಾಸಗಿ ವಿವಿಗಳನ್ನು ಹೆಚ್ಚಿಸಲು, ಖಾಸಗಿಯವರಿಗೆ ವಿಪರೀತ ಹಣ ಮಾಡಲು ಬೇಕಾದ ವೇದಿಕೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಸೃಷ್ಟಿಸಿಕೊಡಲು ಕೇಂದ್ರ- ರಾಜ್ಯ ಬಿಜೆಪಿ ಸರ್ಕಾರಗಳು ಹೊರಟಿವೆ.

ಗುಣಮಟ್ಟದ ಪ್ರಾಧ್ಯಾಪಕರನ್ನು ಮತ್ತು ಅತ್ಯಂತ ಪ್ರಾಯೋಗಿಕವಾದ ಹಾಗೂ ಬದುಕಿಗೆ ಹತ್ತಿರವಾದ “(ಕಲಿಕೆ ಮತ್ತು ಬೋಧನಾ ವಿಧಾನ) ಶಿಕ್ಷಣ ಕೊಡುವುದರ ಕಡೆಗೆ ಯೋಚಿಸುವುದರ ಬದಲಾಗಿ‌ ವಿ ವಿಗಳನ್ನು ಸರ್ಟಿಫಿಕೇಟ್ ನೀಡುವ ಅಂಗಡಿಗಳನ್ನು ಮಾಡಲಾಗುತ್ತಿದೆ.

ಬಿಜೆಪಿಯು ಉನ್ನತ ಶಿಕ್ಷಣವನ್ನು‌ ಸರಿಪಡಿಸುವ ನೆಪದಲ್ಲಿ ಎಲ್ಲವನ್ನೂ ಧ್ವಂಸ ಮಾಡುತ್ತಿದೆ. ಖಾಸಗಿ ಬಂಡವಾಳಿಗರು ಶಿಕ್ಷಣದ ದಿಕ್ಕು ದೆಸೆಗಳನ್ನು ನಿರ್ಧರಿಸುವ ಹೊಲಸು ಕ್ರಮವನ್ನು ಪರಿಚಯಿಸಲಾಗುತ್ತಿದೆ. ಇದು ಸ್ಪಷ್ಟವಾಗಿ ಜನವಿರೋಧಿ ಕ್ರಮ. ದೇಶದ್ರೋಹವೆಂದರೆ ಜನದ್ರೋಹವೆ ಎಂದು ಅರಿತುಕೊಳ್ಳಬೇಕು.

ಈಗಿನ ಪದವಿಯಲ್ಲಿ ಮೂರು ಮೇಜರ್ ವಿಷಯಗಳ ಬದಲಾಗಿ ಕೇವಲ ಎರಡು ವಿಷಯಗಳನ್ನು ಕಲಿಸುವಂತೆ ಹಾಗೂ ಮೂರನೆ ವರ್ಷ ಅಥವಾ 5 & 6 ನೇ ಸೆಮಿಸ್ಟರುಗಳಾಚೆಗೆ ಕೇವಲ ಒಂದು ವಿಷಯವನ್ನು ಮೇಜರ್ ಆಗಿ ಇನ್ನೊಂದನ್ನು ಮೈನರ್ ಆಗಿ ಅಥವಾ ಎರಡನ್ನೂ ಮೇಜರ್ ಆಗಿ ಕಲಿಸಲು ಆದೇಶಿಸಲಾಗಿದೆ. ಇದರಿಂದಾಗಿ ಸಾವಿರಾರು ಉಪನ್ಯಾಸಕರು ಉದ್ಯೋಗ ಕಳೆದುಕೊಳ್ಳುತ್ತಾರೆ . ಮುಂದೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಉದ್ಯೋಗಗಳೇ ಸೃಷ್ಟಿಯಾಗುವುದಿಲ್ಲ.

ಜಗತ್ತಿನ ಅನೇಕ ಪ್ರಮುಖ ಇತಿಹಾಸಕಾರರು ಶುದ್ಧ ವಿಜ್ಞಾನದ ( ಜೆನೆಟಿಕ್ಸ್ ಮುಂತಾದ) ವಿಷಯಗಳ ಮೂಲಕ‌ ತಮ್ಮ ವಿಷಯಗಳನ್ನು ಮಂಡಿಸುತ್ತಿದ್ದಾರೆ.‌ ನಮ್ಮ ವಿದ್ಯಾರ್ಥಿಗಳೂ ಆ ಎಲ್ಲ ವಿಷಯಗಳನ್ನು ಕಲಿಯಬೇಕಲ್ಲವೆ? ಆದರೆ ಒಂದು ಮೇಜರ್ ಸಬ್ಜೆಕ್ಟ್ ಎಂದು ಮಾಡಿ ಮಕ್ಕಳನ್ನು ಕೂಪ ಮಂಡೂಕಗಳನ್ನಾಗಿಸಲು ಹೊರಟಿದ್ದಾರೆ.

ಉನ್ನತ ಶಿಕ್ಷಣ ಕುಸಿದು ಬಿದ್ದರೆ ರಾಷ್ಟ್ರವೂ ಕುಸಿದು ಬೀಳುತ್ತದೆ. ಜೊತೆಗೆ 21ನೇ ಶತಮಾನ ಬಹುಶಿಸ್ತುಗಳ ಯುಗ ಎಂಬುದನ್ನು ಬಿಜೆಪಿ ಅರಿತುಕೊಳ್ಳಬೇಕು. ಅಜ್ಞಾನವನ್ನು ಆರಾಧಿಸುವ ಮೂರ್ಖರ ಮಾತು ಕೇಳಿ ರಾಜ್ಯ ಮತ್ತು ರಾಷ್ಟ್ರಗಳ ಶಿಕ್ಷಣವನ್ನು ಕೊಲ್ಲಬಾರದೆಂದು ಒತ್ತಾಯಿಸುತ್ತೇನೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

ಪಿ ಯು ಸಿ ಮಟ್ಟದಲ್ಲಿ‌ ವಿಜ್ಞಾನ ಕಲಿತವರು ಇದುವರೆಗೆ ಬಿಎಸ್ಸಿ ಹೋಗಲು‌ ಮನಸ್ಸಾಗದಿದ್ದರೆ ಬಿ.ಕಾಂ ಅಥವಾ ಬಿಎಗೆ ಸೇರಬಹುದಿತ್ತು. ಈ ಆಯ್ಕೆಗಳು ರದ್ದಾಗುತ್ತವೆ ಎಂಬಂತೆ ಆದೇಶ ಹೊರಡಿಸಲಾಗಿದೆ.

ಶಿಕ್ಷಣ, ಪಠ್ಯಕ್ರಮಗಳನ್ನು ನಿರ್ಧರಿಸುವ ಹಕ್ಕು ರಾಜ್ಯಗಳಿಗೆ ಸಂಬಂಧಿಸಿದ್ದು. ರಾಜ್ಯಗಳ ಅಧಿಕಾರಗಳನ್ನು ದಮನ ಮಾಡಿ ಕೇಂದ್ರದ ಬಿಜೆಪಿ ಸರ್ಕಾರವು ಈ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಹೊರಟಿದೆ. ಇದಕ್ಕೆ ತಕ್ಕ ಹಾಗೆ ಕೇಂದ್ರದ ದಮನಕಾರಿ ನೀತಿಯನ್ನು ಪ್ರಶ್ನಿಸಬೇಕಾದ, ಪ್ರತಿಭಟಿಸಬೇಕಾದ ರಾಜ್ಯ ಸರ್ಕಾರವು ರಾಜ್ಯದ ಹಿತಾಸಕ್ತಿಯನ್ನು ಎಲ್ಲರಿಗಿಂತ ಮುಂದೆ ನಿಂತು ಬಲಿಕೊಡಲು ಇನ್ನಿಲ್ಲದ ಉತ್ಸಾಹ ತೋರುತ್ತಿದೆ ಎಂದು ಸಿದ್ದರಾಮಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು