ಬೆಂಗಳೂರು: ನಿನ್ನೆ ಬಿಡದಿಯಲ್ಲಿ ಲವ್ ಯೂ ರಚ್ಚು ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣ ವೇಳೆ ಅವಘಡ ಸಂಭವಿಸಿ ವಿವೇಕ್ ಎಂಬ ಫೈಟರ್ ಸಾವನ್ನಪ್ಪಿದ್ದರು. ಮತ್ತೊಬ್ಬ ಫೈಟರ್ ರಂಜಿತ್ ಗಾಯಗೊಂಡು ಇದೀಗ ಆಸ್ಪತ್ರೆಯಲ್ಲಿದ್ದಾರೆ.
ಈ ದುರಂತ ನಡೆದಾಗ ನಾನು ಸ್ಪಾಟ್ನಲ್ಲಿ ಇರಲಿಲ್ಲ. ನಾನು ಅಲ್ಲಿ ಇದ್ದಿದ್ದರೆ ಎಚ್ಚರಿಕೆ ವಹಿಸುವಂತೆ ಹೇಳುತ್ತಿದ್ದೆ ಎಂದು ಲವ್ ಯೂ ರಚ್ಚು ಚಿತ್ರದ ನಾಯಕನಟ ಅಜಯ್ ರಾವ್ ಹೇಳಿಕೆ ನೀಡಿದ ಬೆನ್ನಲ್ಲೇ ಗಾಯಾಳು ಫೈಟರ್ ರಂಜಿತ್ ನಾಯಕನಟನ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.
ಆಸ್ಪತ್ರೆಯಲ್ಲಿ ಮಾತನಾಡಿದ ಫೈಟರ್ ರಂಜಿತ್, ತಾನು ಪೆಟ್ಟಾಗಿ ಬಿದ್ದಾಗ ಹೀರೋ ಅಲ್ಲೇ 10-15 ಮೀಟರ್ ದೂರದಲ್ಲೇ ಇದ್ದರು. ನನ್ನ ಸಹಾಯಕ್ಕೆ ಬರದೇ ಸುಮ್ಮನೆ ನೋಡುತ್ತಾ ಕೂತಿದ್ದರು. ಘಟನೆ ಸ್ಥಳದಲ್ಲಿ ತಾನು ಇರಲಿಲ್ಲ ಅಂತ ಮಾಧ್ಯಮದ ಮುಂದೆ ಯಾಕೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಅಜಯ್ ರಾವ್ ಹೇಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಮೆಟಲ್ ರೋಪ್ ಬಳಸಿ ಸಾಹಸ ಚಿತ್ರೀಕರಣ ನಡೆಸಲಾಗುತ್ತಿತ್ತು. ಈ ವೇಳೆ ಕ್ರೇನ್ ಆಕಸ್ಮಿಕವಾಗಿ ಹೈ ಟೆನ್ಷನ್ ವೈರ್ಗೆ ತಾಕಿದ ಪರಿಣಾಮ ಇಬ್ಬರು ಫೈಟರ್ಗಳಿಗೆ ಶಾಕ್ ಹೊಡೆದಿದೆ. ವಿವೇಕ್ ಈ ಸಂದರ್ಭದಲ್ಲಿ ಮೆಟಲ್ ರೋಪ್ ಎಳೆಯುತ್ತಿದ್ದರೆನ್ನಲಾಗಿದೆ.
ಈ ಘಟನೆ ಬಗ್ಗೆ ನಾಯಕನಟ ಅಜಯ್ ರಾವ್ ಆಕ್ರೋಶ ವ್ಯಕ್ತಪಡಿಸಿದ್ದರು. ಸರಿಯಾದ ಮುಂಜಾಗ್ರತೆ ಇಲ್ಲದೇ ಚಿತ್ರೀಕರಣ ನಡೆಯುತ್ತಿತ್ತೆಂದು ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಮೆಟಲ್ ರೋಪ್ ಬಳಕೆಯಿಂದ ಈ ದುರಂತ ಸಂಭವಿಸಿದೆ. ಸಾಹಸ ದೃಶ್ಯ ಚಿತ್ರೀಕರಣ ವೇಳೆ ಮುಂಜಾಗ್ರತೆ ವಹಿಸಬೇಕೆಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಹೀಗಾಗಿ ಎಲ್ಲದರಲ್ಲೂ ಮೂಗು ತೂರಿಸುತ್ತೇನೆಂದು ದೂರುತ್ತಾರೆ. ಮೆಟಲ್ ರೋಪ್ ಬಳಸಬಾರದು ಎಂದು ಹೇಳಿ ನಾನು ಕೆಟ್ಟವನಾಗಿ ಹೋಗಿದ್ದೆ. ಈಗ ದುರಂತ ಆಗಿ ಹೋಗಿದೆ. ಮೃತ ವಿವೇಕ್ಗೆ ನ್ಯಾಯ ಸಿಗುವವರೆಗೂ ಶೂಟಿಂಗ್ಗೆ ಹೋಗುವುದಿಲ್ಲ ಎಂದು ಅಜಯ್ ರಾವ್ ಹೇಳಿದ್ದರು.
ಈ ಪ್ರಕರಣದಲ್ಲಿ ಪೊಲೀಸರು ಚಿತ್ರದ ನಿರ್ದೇಶಕ ಶಂಕರ್ ರಾಜು, ಸ್ಟಂಟ್ ಮಾಸ್ಟರ್ ವಿನೋದ್, ಶೂಟಿಂಗ್ ಸ್ಪಾಟ್ನ ಜಮೀನು ಮಾಲೀಕ ಪುಟ್ಟರಾಜು ಹಾಗೂ ಕ್ರೇನ್ ಚಾಲಕ ಮುನಿಯಪ್ಪ ಈ ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇಂದು ಬಿಡದಿ ಠಾಣೆಯಲ್ಲಿ ಮೃತ ವಿವೇಕ್ ಕುಟುಂಬದವರಿಂದ ದೂರು ದಾಖಲಾಗುವ ಸಾಧ್ಯತೆ ಇದೆ.
ಸ್ಟಂಟ್ ಮಾಸ್ಟರ್ ವಿನೋದ್ ಅವರ ಬೇಜವಾಬ್ದಾರಿತನದಿಂದ ಈ ಘಟನೆ ಆಗಿ ಹೋಗಿದೆ ಎಂಬಂತಹ ದೂರುಗಳು ಕೇಳಿಬರುತ್ತಿವೆ. ಆದರೆ, ಗಾಯಗೊಂಡಿರುವ ಫೈಟರ್ ರಂಜಿತ್ ಅವರು ಈ ಅಭಿಪ್ರಾಯಗಳನ್ನ ತಳ್ಳಿಹಾಕಿದ್ದಾರೆ.
ಸ್ಟಂಟ್ ಮಾಸ್ಟರ್ ಜೊತೆ ಏಳೆಂಟು ವರ್ಷಗಳಿಂದ ತಾನು ಕೆಲಸ ಮಾಡುತ್ತಿದ್ದೇನೆ. ಅವರಷ್ಟು ಕೇರ್ ಮಾಡುವ ಮಾಸ್ಟರ್ ಅನ್ನು ನಾನು ನೋಡಿಯೇ ಇಲ್ಲ. ಅವರ ಬಗ್ಗೆ ಊಹಾಪೋಹ ಹರಿದಾಡುತ್ತಿರುವುದನ್ನು ನಾನು ಒಪ್ಪಲ್ಲ. ಕ್ರೇನ್ ಆಪರೇಟರ್ ಮಿಸ್ಟೇಕ್ನಿಂದ ಮಾತ್ರ ಈ ಘಟನೆ ಆಗಿದೆ. ಅದು ಬಿಟ್ಟರೆ ಬೇರೆ ಯಾರೂ ಇದಕ್ಕೆ ಹೊಣೆಯಲ್ಲ ಎಂದು ರಂಜಿತ್ ಹೇಳಿದ್ದಾರೆ.