ಬಳ್ಳಾರಿ: ಮುಂದಿನ ದಿನಗಳಲ್ಲಿ ಸಾರಿಗೆ ನೌಕರರ ಪ್ರಮುಖ ಬೇಡಿಕೆಯಾದ ವೇತನ ಸಮಸ್ಯೆ ನಿವಾರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅಭಯ ನೀಡಿದ್ದಾರೆ.
ಇಂದು ಬಳ್ಳಾರಿಯಲ್ಲಿ ಆಯೋಜಿಸಿದ್ದ ಸಾರಿಗೆ ನೌಕರರ ಸೌಹಾರ್ದಯುತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ನು ಮುಷ್ಕರದ ವೇಳೆ ಅನೇಕ ನೌಕರರು ವರ್ಗಾವಣೆ, ಅಮಾನತು ಮತ್ತು ವಜಾ ದಂಥ ಶಿಕ್ಷೆಗೆ ಒಳಗಾಗಿದ್ದೀರಿ ಈ ಬಗ್ಗೆ ನನಗೆ ಹಲವಾರು ಮನವಿ ಪತ್ರಗಳು ಬಂದಿದ್ದು, ಅತೀ ಶೀಘ್ರದಲ್ಲೇ ಎಲ್ಲ ನೌಕರರಿಗೂ ಒಳ್ಳೆಯದನ್ನು ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ಹೀಗಾಗಿ ಯಾರು ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಇನ್ನು ಇಂದಿನ ದಿನಗಳಲ್ಲಿ ಖಾಸಗಿ ಸಾರಿಗೆಯವರೊಂದಿಗೆ ಸರ್ಕಾರಿ ಸಾರಿಗೆ ಸ್ಪರ್ಧೆ ಮಾಡಲಾರದಷ್ಟು ಆರ್ಥಿಕವಾಗಿ ಹಿಂದುಳಿದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಾರಿಗೆಯನ್ನು ಲಾಭದತ್ತ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ರಾಜ್ಯಾದ್ಯಂತ ಮುಂದಿನ ದಿನಗಳಲ್ಲಿ ಪ್ರವಾಸ ಮಾಡಿ ಸಾರಿಗೆ ನೌಕರರಾದ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಗಳನ್ನು ಭೇಟಿ ಮಾಡಿ ಆ ನಿಮ್ಮೆಲ್ಲರ ಸಮಸ್ಯೆಯನ್ನು ಆಲಿಸಿ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಡೋಣ ಎಂದು ತಿಳಿಸಿದರು.
ಇನ್ನು ಅಧಿಕಾರಿಗಳು ಕೂಡ ನಿಮ್ಮ ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಕೋರ್ಟ್‌ನಲ್ಲಿ ಇರುವ ಪ್ರಕರಣಗಳ ಬಗ್ಗೆಯೂ ಅಧಿಕಾರಿಗಳೊಂದಿಗೆ ಕೂತು ಮಾತನಾಡಿದ್ದು, ಆ ಪ್ರಕರಣಗಳ ಇತ್ಯರ್ಥ ಪಡಿಸುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಂಡು ನಿಮಗೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯಂತಹ ಆಲೋಚನೆ ಬರದ ರೀತಿ ನಡೆಸಿಕೊಳ್ಳಲಾಗುವುದು ಎಂದು ಹೇಳಿದರು.
ಇನ್ನು ಇದನ್ನು ಲಾಭದಾಯಕವಾಗಿ ಮಾಡುವ ನಿಟ್ಟಿನಲ್ಲಿ ನಾವು ಮತ್ತು ಅಧಿಕಾರಿಗಳು ಚರ್ಚಿಸುತ್ತೇವೆ. ನಿಮಗೆ ವೇತನದಲ್ಲಿ ಅನ್ಯಾಯವಾಗದ ರೀತಿ ಮಾಡುವ ಜವಾಬ್ದಾರಿ ನನ್ನ ಮೇಲಿದೆ ಅದನ್ನು ನಾನು ಮಾಡುತ್ತೇನೆ. ನೀವು ನಿಮ್ಮ ಕೆಲಸವನ್ನು ಮಾಡಿಕೊಂಡು ಹೋಗಿ ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಸಂಸ್ಥೆಗೆ ಒಳ್ಳೆಯದಾಗುವ ನಿಟ್ಟಿನಲ್ಲಿ ನಾವು ನೀವೆಲ್ಲರೂ ನಡೆದುಕೊಳ್ಳೋಣ. ಮುಂದೆ ನಿಮಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಎಲ್ಲರಿಗೂ ಒಳ್ಳೇದಾಗಲಿದೆ ಎಂದು ತಿಳಿಸಿದರು.
ಇನ್ನು ಕೇಂದ್ರ ಸರ್ಕಾರದಿಂದ ಸಾರಿಗೆ ಸಂಸ್ಥೆಗೆ ಬರಬೇಕಿರುವ ಅನುದಾನದ ಬಗ್ಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿ ಅನುದಾನ ತರಲಾಗುವುದು. ಹೀಗಾಗಿ ನೀವು ಯಾವುದೇ ಗೊಂದಲಕ್ಕೆ ಒಳಗಾಗದೇ ನಿಮ್ಮ ಕರ್ತವ್ಯವನ್ನು ಮಾಡಿಕೊಂಡು ಹೋಗಿ ಎಂದು ಹೇಳಿದರು.