NEWSನಮ್ಮಜಿಲ್ಲೆನಮ್ಮರಾಜ್ಯಲೇಖನಗಳು

ಭರವಸೆಯ ಬೆಳಕು ಎಂಬಂತೆ ಶ್ರೀರಾಮುಲು ನೋಡುತ್ತಿವೆ ಕಂಬನಿ ತುಂಬಿದ ಲಕ್ಷಾಂತರ ಆ ಕಣ್ಣುಗಳು : ಮಾತಿಗೆ ಬದ್ಧರಾಗಬೇಕಿದೆ ಶ್ರೀ

ಸಾರಿಗೆ ನೌಕರರ ಪಾಲಿಗೆ ಪೆಡಂಭೂತವಾಗಿ ಕಾಡಿದ ಆ ನಾಯಕರು ಈಗ ಮಾಜಿಗಳು l ಸಾರಿಗೆ ನೌಕರರ ಹಾಕಿದ ಶಾಪ, ಕಣ್ಣೀರು ಬಿಎಸ್‌ವೈ ಸರ್ಕಾರಕ್ಕೆ ತಟ್ಟಿದ್ದರಿಂದಲೇ ಪತನವಾಯ್ತಾ?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಅಂದಿನ ಸರಕಾರ, ಅಂದಿನ ಸಾರಿಗೆ ಸಚಿವ ಲಕ್ಷ್ಮಣ ಸವದಿ ಲಕ್ಷಾಂತರ ಮಂದಿ ಸಾರಿಗೆ ನೌಕರರ ಪಾಲಿಗೆ ಪೆಡಂಭೂತವಾಗಿ ಕಾಡಿದ್ದರು. ಹೀಗಾಗಿ ಅವರಿಬ್ಬರ ಹೆಸರು ಕೇಳಿದರೆ ಸಾಕು ಸಾರಿಗೆ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರು ಸಿಡಿದು ತಮಗೆ ಸಾಕೆನಿಸುವಷ್ಟು ಹೊತ್ತು ಈಗಲೂ ಶಾಪ ಹಾಕುತ್ತಿರುತ್ತಾರೆ.

ಹೌದು! ಸಾರಿಗೆ ನೌಕರರ ಪಾಲಿನ ದೈವವಾಗಬೇಕಿದ್ದ ಈ ಇಬ್ಬರು ನಾಯಕರು ಅಧಿಕಾರದ ಮದದಲ್ಲಿ ಸಾರಿಗೆ ನೌಕರರನ್ನು ಇನ್ನಿಲ್ಲದಂತೆ ಕಾಡಿದರು. ನೌಕರರನ್ನು ಕಳ್ಳರಂತೆ ನೋಡಿದರು. ಏನೋ ಇವರ ಮನೆಯಿಂದ ತಂದು ಕೊಡುವರೀತಿ ಅವರ ಬೇಡಿಕೆಗಳಿಗೆ ಸ್ಪಂದಿಸದೆ ಉದ್ಧಟತನ ತೋರಿದರು.

ನೌಕರರು ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದರು. ಕಾರಣ ಇಷ್ಟೇ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರದ ಹಾದಿ ಹಿಡಿದ ಸಾರಿಗೆ ನೌಕರರಿಗೆ ಅಂದಿನ ಯಡಿಯೂರಪ್ಪ ಸರಕಾರ ಇನ್ನಿಲ್ಲದ ಹಿಂಸೆ ಕೊಟ್ಟುಬಿಟ್ಟಿತ್ತು. ಸಾರಿಗೆ ನೌಕರರ ಮುಷ್ಕರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಂದಿನ ಸಾರಿಗೆ ಸಚಿವ ಲಕ್ಷ್ಮಣ ಸವದಿ ಇಬ್ಬರೂ ಸಾರಿಗೆ ನೌಕರರ ಮೇಲೆ ತಮ್ಮ ದರ್ಪವನ್ನು ಪ್ರಯೋಗಿಸಿಯೇ ಬಿಟ್ಟರು.

ಹೀಗಾಗಿ ಸಾರಿಗೆ ಸಂಸ್ಥೆ ಎಸ್ಮಾ ಕಾಯ್ದೆ ಅಡಿಯಲ್ಲಿ ಸಾವಿರಾರು ನೌಕರರನ್ನು ಸೇವೆಯಿಂದ ವಜಾ ಮಾಡಿತು. ಸಾವಿರಾರು ನೌಕರರನ್ನು ಅಮಾನತುಗೊಳಿಸಿತು. ಸಾವಿರಾರು ನೌಕರರ ಮೇಲೆ ಮೊಕದ್ದಮೆ ಹೂಡಿ ರಾತ್ರೋರಾತ್ರಿ ಕಳ್ಳರಂತೆ ನೌಕರರನ್ನು ಬಂಧಿಸಿ ಅವರ ಕುಟುಂಬದ ಯುಗಾದಿ ಹಬ್ಬದ ಸಂಭ್ರಮವನ್ನು ಕಿತ್ತುಕೊಂಡಿತು. ರಾತ್ರಿ ಕಳೆದು ಬೆಳಗಾಗುವುದರೊಳಗೆ ಸಾವಿರಾರು ಸಾರಿಗೆ ನೌಕರರು ಬೀದಿಗೆ ಬಿದ್ದರು.

ಈ ಹಿಂದಿನ ಯಾವ ಸರ್ಕಾರವು ನೌಕರರ ಮೇಲೆ ಈ ರೀತಿ ದಬ್ಬಾಳಿಕೆ ನಡೆಸಿದ್ದು ನನಗಂತೂ ನೆನಪಿಲ್ಲ. ಆಶ್ಚರ್ಯ ಎಂದರೆ ಇದಾದ ಒಂದೆರಡು ತಿಂಗಳಿನಲ್ಲಿಯೇ ಯಡಿಯೂರಪ್ಪ ಸರಕಾರ ಪತನವಾಯಿತು. ಅಷ್ಟೇ ಅಲ್ಲ ಆಶ್ಚರ್ಯಕರ ರೀತಿಯಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ಪಡೆದು ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿ ಮಾಜಿ ಆಗಿಬಿಟ್ಟರು.

ಈಗ ಬಸವರಾಜ ಬೊಮ್ಮಾಯಿ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಯಾವಾಗಲೂ ಸಿನಿಮಾ ಹೀರೋ ರೀತಿಯ ಗೆಟಪ್ನಲ್ಲಿ ಮಿಂಚುತ್ತಿರುವ ಬಳ್ಳಾರಿ ಹೀರೋ ಬಿ.ಶ್ರೀರಾಮುಲು ಈಗ ಸಾರಿಗೆ ಸಚಿವರಾಗಿದ್ದಾರೆ.

ಇನ್ನು ಸಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಶ್ರೀರಾಮುಲು ಶನಿವಾರ (ಆಗಸ್ಟ್‌ 14) ಬಳ್ಳಾರಿಯಲ್ಲಿ ಹೇಳಿಕೆ ನೀಡಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ ನೌಕರರ ವರ್ಗಾವಣೆ ಅಮಾನತು ಆದೇಶವನ್ನು ರದ್ದುಪಡಿಸಲಾಗುವುದು ಹಾಗೂ ಅವರ ವಿರುದ್ಧ ದಾಖಲಾಗಿರುವ ಎಲ್ಲ ಮೊಕದ್ದಮೆಗಳನ್ನು ಹಿಂಪಡೆಯಲಾಗುವುದು ಎಂಬ ಸಿಹಿಸುದ್ದಿಯನ್ನು ನೀಡುವ ಮೂಲಕ ಬೀದಿಗೆ ಬಿದ್ದಿರುವ ಲಕ್ಷಾಂತರ ಸಾರಿಗೆ ನೌಕರರ ಮನಸ್ಸಿನಲ್ಲಿ ಆಶಾಭಾವನೆ ಮೂಡಿಸಿದ್ದಾರೆ.

ಹೌದು! ಸಚಿವರಾಗುತ್ತಿದ್ದಂತೆ ಸಾರಿಗೆ ನೌಕರರ ಮೇಲಿನ ಕಾಳಜಿಯಿಂದ ಶ್ರೀರಾಮುಲು ಅವರು ನೀಡಿದ ಭರವಸೆಯನ್ನು ಆದಷ್ಟು ಶೀಘ್ರ ಕಾರ್ಯರೂಪಕ್ಕೆ ತರಬೇಕಾಗಿದೆ. ಪ್ರಜಾಸತ್ತಾತ್ಮಕವಾಗಿ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಿ ಶಾಂತಿಯುತವಾಗಿ ಹೋರಾಟ ಮಾಡಲು ಹೋಗಿ ಸೇವೆಯಿಂದಲೇ ವಜಾಗೊಂಡಿರುವ ನೌಕರರನ್ನು ಮತ್ತೆ ಕೆಲಸಕ್ಕೆ ಸೇರಿಕೊಳ್ಳಬೇಕಾಗಿದೆ. ಅಮಾನತುಗೊಂಡಿರುವ ನೌಕರರ ಅಮಾನತು ಆದೇಶವನ್ನು ಹಿಂಪಡೆದು ಅವರಿಗೆ ಕೆಲಸ ನೀಡಬೇಕಾಗಿದೆ.

ಶಿಕ್ಷೆಯ ರೂಪದಲ್ಲಿ ದೂರದ ಜಿಲ್ಲೆಗಳಿಗೆ ವರ್ಗಾವಣೆಗೊಂಡಿರುವ ನೌಕರರ ವರ್ಗಾವಣೆ ಆದೇಶವನ್ನು ಕೂಡಲೇ ರದ್ದುಪಡಿಸಿ, ಮೊದಲಿನ ಸ್ಥಳದಲ್ಲೇ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿಕೊಡಬೇಕಿದೆ. ಇನ್ನು ಎಲ್ಲ ಬೇಡಿಕೆಗಳನ್ನು ಅಲ್ಲದಿದ್ದರೂ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕಿದೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರಂತೆ ಪರಿಗಣಿಸಲು ಮುಂದಾಗಬೇಕಿದೆ.

ಇಲ್ಲಸಲ್ಲದ ಕಾನೂನುಗಳ ಕುಂಟು ನೆಪ ಹೇಳಿ ದಾರಿತಪ್ಪಿಸುವ  ಕೆಲ ಅಧಿಕಾರಿಗಳಿಗೆ ಸಚಿವರು ಕಿವಿಯಾಗದಿರಲಿ
ಇಲ್ಲಿ ಪ್ರಮುಖವಾಗಿ ಒಂದು ಅಪಾಯವೂ ಇದೆ ನೋಡಲು ಸಚಿವ ಶ್ರೀರಾಮುಲು ಮುಗ್ಧರಂತೆ ಕಾಣುತ್ತಾರೆ ಅವರ ಈ ಮುಗ್ಧತೆಯ ಲಾಭಪಡೆಯುವ ಸಾರಿಗೆ ಸಂಸ್ಥೆಯ ಕೆಲ ಹಿರಿಯ ಅಧಿಕಾರಿಗಳು ಇಲ್ಲಸಲ್ಲದ ಕಾನೂನುಗಳ ಕುಂಟು ನೆಪ ಹೇಳಿಕೊಂಡು ಸಾರಿಗೆ ನೌಕರರ ಅಮಾನತು, ವರ್ಗಾವಣೆ ಆದೇಶಗಳನ್ನು ರದ್ದುಪಡಿಸುವಂತೆ ದಾರಿತಪ್ಪಿಸುವ ಸಾಧ್ಯತೆಗಳಿವೆ.

ಕೆಲವೊಮ್ಮೆ ಬೆಂಕಿಯಂತೆ ಆರ್ಭಟಿಸುವ ಸಚಿವ ಶ್ರೀರಾಮುಲು ಅಧಿಕಾರಿಗಳ ಯಾವ ಸಬೂಬುಗಳಿಗೂ ಸೊಪ್ಪುಹಾಕದೇ ಸಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ನೌಕರರ ಪರವಾಗಿ ನೀಡಿರುವ ಹೇಳಿಕೆಗಳಿಗೆ ಬದ್ದರಾಗಬೇಕಿದೆ. ನಾಲ್ಕೈದು ತಿಂಗಳುಗಳಿಂದ ಸಂಬಳವಿಲ್ಲದೆ ಕುಟುಂಬ ಸಮೇತ ಬೀದಿಗೆ ಬಿದ್ದಿರುವ ಸಾರಿಗೆ ನೌಕರರ ಕಣ್ಣೀರನ್ನು ಒರೆಸುವ ಕೆಲಸ ಮಾಡಬೇಕಿದೆ.

ಆಡಿದ ಮಾತಿಗೆ ಬದ್ಧರಾಗಿ ತಾವೊಬ್ಬ ನೌಕರರ ಪರವಾಗಿರುವ ಸಾರಿಗೆ ಸಚಿವ ಎಂಬುದನ್ನು ಸಾಬೀತು ಪಡಿಸಿ ತೋರಿಸಬೇಕಿದೆ. ನೊಂದು-ಬೆಂದು ನೋವಿನ ಕಡಲಿನಲ್ಲಿ ತೇಲುತ್ತಿರುವ ನೊಂದ ಸಾರಿಗೆ ನೌಕರರ ವಜಾ, ಅಮಾನತು ಆದೇಶವನ್ನು ಹಿಂಪಡೆದು ವರ್ಗಾವಣೆ ಆದೇಶವನ್ನು ರದ್ದು ಪಡಿಸಿ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿದರೆ ರಾತ್ರಿ ಕಳೆದು ಬೆಳಗಾಗುವುದರೊಳಗೆ ಸಚಿವ ಶ್ರೀರಾಮುಲು ಲಕ್ಷಾಂತರ ಮಂದಿ ಸಾರಿಗೆ ನೌಕರರ ಹಾಗೂ ಅವರ ಕುಟುಂಬದವರ ಪಾಲಿನ ಹೀರೋ ಆಗುವುದರಲ್ಲಿ ಅನುಮಾನವೇ ಇಲ್ಲ.

Leave a Reply

error: Content is protected !!
LATEST
BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ