ಶಿವಮೊಗ್ಗ: ನಮಗೆ ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಯಾವಾಗ ಯಾವ ಸ್ಥಾನಮಾನ ಕೊಡಬೇಕು ಎಂಬುದನ್ನು ತೀರ್ಮಾನ ಮಾಡುತ್ತಾರೆ ಎಂದು ರಾಜ್ಯ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವಾಗಿಯೇ ಮಂತ್ರಿ ಆಗಬೇಕು. ರಾಜ್ಯಾಧ್ಯಕ್ಷ ಆಗಬೇಕು ಎನ್ನುವಂತಹ ಪ್ರಶ್ನೆ ಇಲ್ಲ. ಅದಕ್ಕಾಗಿ ಪ್ರಯತ್ನ ಸಹ ಪಡುತ್ತಿಲ್ಲ ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಅವರು ರಾಜ್ಯದಲ್ಲಿ ಈ ಹಿಂದೆ ಅನೇಕ ಹೋರಾಟ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು, ಮಂತ್ರಿ ಆಗಬೇಕು, ಮುಖ್ಯಮಂತ್ರಿ ಆಗಬೇಕು ಎಂಬ ಉದ್ದೇಶ ಇಟ್ಟುಕೊಂಡು ಹೋರಾಟ ಮಾಡಲಿಲ್ಲ. ನಾವು ಮಾಡುತ್ತಿರುವ ಕೆಲಸವನ್ನು ಜನ ಗುರುತಿಸಬೇಕು. ನನ್ನ ಸಹೋದರ ರಾಘವೇಂದ್ರ ಅವರಾಗಲಿ, ನಾನಾಗಲಿ ಯಾವುದೇ ಸ್ಥಾನ ಗುರುತಿಸಿಕೊಂಡು ಕೆಲಸ ಮಾಡುತ್ತಿಲ್ಲ ಎಂದು ತಿಳಿಸಿದರು. .
ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಬೇಕಾಗುತ್ತದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರಿಗೆ ಹಳೇ ಮೈಸೂರು ಭಾಗಕ್ಕೆ ಹೆಚ್ಚು ಒತ್ತು ಕೊಡಬೇಕು ಎಂಬ ಅಪೇಕ್ಷೆ ಅವರದ್ದಾಗಿದೆ. ಕೆ.ಆರ್.ಪೇಟೆ, ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡಿದ್ದೆ. ಆ ಭಾಗದಲ್ಲಿ ಪಕ್ಷವನ್ನು ಇನ್ನು ಗಟ್ಟಿಗೊಳಿಸಲು ಅವಕಾಶ ಇದೆ ಎಂದು ಹೇಳಿದ್ದಾರೆ.
ಈ ಹಿಂದೆ ನಡೆದ ವಿಧಾನಸಭೆ ಚುನಾವಣೆ ನಡೆದ ಸಂದರ್ಭದಲ್ಲಿ ಬಿಜೆಪಿ 104, 110 ಸ್ಥಾನಕ್ಕೆ ಬಂದು ನಿಂತಿತ್ತು. ಹೀಗಾಗಿಯೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು ಎಂಬುದು ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರ ಕನಸು ಸಹ ಅದೇ ಆಗಿದೆ.
ಆ ಕನಸು ನನಸು ಆಗಬೇಕು ಅಂದರೆ ಹಳೇ ಮೈಸೂರು ಭಾಗಕ್ಕೆ ಹೆಚ್ಚು ಒತ್ತು ಕೊಡಬೇಕಿದೆ. ಹಾಗಾಗಿಯೇ ಆ ಭಾಗದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದೇನೆ ಎಂದು ವಿಜಯೇಂದ್ರ ತಿಳಿಸಿದರು.