ಬೆಂಗಳೂರು: ಮನೆಯಲ್ಲಿ ಕಟ್ಟಿಗೆ ಕತ್ತರಿಸುವ ವೇಳೆ ಹೆಬ್ಬೆರಳು ತುಂಡರಿಸಿಕೊಂಡಿದ್ದ ಮುಷ್ಕರ ವೇಳೆ ವಜಾಗೊಂಡಿರುವ ಬಿಎಂಟಿಸಿ ಚಾಲಕರೊಬ್ಬರಿಗೆ ಸುಪ್ರೀಂಕೋರ್ಟ್ ಹಾಗೂ ಹೈ ಕೋರ್ಟ್ ವಕೀಲ ಶಿವರಾಜು ಅವರು ಚಿಕಿತ್ಸೆ ವೆಚ್ಚದ ಜತೆಗೆ ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಂಗಳವಾರ ಸಂಜೆ ವಿಜಯನಗರದ ಮನೆಯಲ್ಲಿ ಕಟ್ಟಿಗೆ ಕತ್ತರಿಸುವ ವೇಳೆ ಬಿಎಂಟಿಸಿ 7ನೇ ಘಟಕದ ಚಾಲಕ ಎಸ್. ಮಂಜಣ್ಣ ಅವರ ಹೆಬ್ಬೆರಳು ತುಂಡಾಗಿತ್ತು. ಕೂಡಲೆ ಅವರನ್ನು ಜಯನಗರದಲ್ಲಿರುವ ಸಂಜಯಗಾಂಧಿ ಆಸ್ಪತ್ರೆಗೆ ದಾಖಲಿಸಲಾಯಿತು.
ಬಳಿಕ ಚಾಲಕ ಮಂಜಣ್ಣನ ಪತ್ನಿ ಮತ್ತು ಮಗ ವಕೀಲ ಶೀವರಾಜು ಅವರಿಗೆ ಫೋನ್ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ. ಅವರ ಮಾತಿನಲ್ಲೇ ಎಲ್ಲವನ್ನು ತಿಳಿದುಕೊಂಡ ವಕೀಲ ಶೀವರಾಜು ಕೂಡಲೇ ಆಸ್ಪತ್ರೆಗೆ ದಾವಿಸಿ ತುಂಡಾಗಿದ್ದ ಹೆಬ್ಬೆರಳಿನ ತುಂಡನ್ನು ಮತ್ತೆ ಸೇರಿಸುವ ಶಸ್ತ್ರ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದಾರೆ. ಜತೆಗೆ ಮಂಜಣ್ಣ ಅವರ ಮಗನ ಬ್ಯಾಂಕ್ ಖಾತೆಗೆ 5 ಸಾವಿರ ರೂ. ಹಣ ಕಳುಹಿಸುವ ಮೂಲಕ ಚಿಕಿತ್ಸೆಗೆ ನೆರವಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಚಾಲಕ ಮಂಜಣ್ಣ, ನನ್ನ ಹೆಬ್ಬೆರಳು ತುಂಡಾದ ಕೂಡಲೆ ನೆರವಿಗೆ ಬಂದು ಚಿಕಿತ್ಸೆ ವೆಚ್ಚವನ್ನು ವಕೀಲ ಶೀವರಾಜು ನೋಡಿಕೊಂಡು ನನಗೆ ಧೈರ್ಯ ತುಂಬಿದರು. ಸಾರಿಗೆ ನೌಕರರ ಮುಷ್ಕರದ ವೇಳೆ ನನ್ನನ್ನು ವಜಾ ಮಾಡಲಾಗಿದೆ. ಆದರೆ, ನಾನು ಮುಷ್ಕರದ ಸಮಯದಲ್ಲಿ ಕೋವಿಡ್ ಪಾಸಿಟಿವ್ ಆಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಆದರೂ ನನ್ನನ್ನು ವಜಾ ಮಾಡಿದ್ದಾರೆ.
ಆದರೆ, ಈ ರೀತಿ ನಡೆದುಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳೇ ನಮ್ಮ ವಿರುದ್ಧವೆ ನಿಂತಿದ್ದಾರೆ. ನ್ಯಾಯ ಎಲ್ಲಿದೆ ಎಂದು ಮಂಜಣ್ಣ ಪ್ರಶ್ನಿಸಿದ್ದಾರೆ. ಅಲ್ಲದೆ ನಾನು 24 ವರ್ಷ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರೂ ನಮ್ಮನ್ನು ಈರೀತಿ ನಡೆಸಿಕೊಂಡರಲ್ಲ ಎಂಬ ಬೇಸರವನ್ನು ಹೊರಹಾಕಿದರು.
ಈ ನಡುವೆ ನನಗೆ ಇದೊಂದು ಸಮಸ್ಯೆಯಾಗಿದೆ. ಸಂಸ್ಥೆಯ ಯಾರೊಬ್ಬರು ಬಂದಿಲ್ಲ. ಆದರೆ ದೇವರಂತೆ ಶಿವರಾಜು ಸರ್ ಬಂದು ನಮಗೆ ನೆರವಾದರು ಎಂದು ಅವರಿಗೆ ಧನ್ಯವಾದ ತಿಳಿಸಿದರು.
ಪಾಪ ವಜಾಗೊಂಡಿರುವ ಬಿಎಂಟಿಸಿ ನೌಕರ ಮಂಜಣ್ಣನ ಹೆಬ್ಬೆರಳು ತುಂಡಾದ ವಿಷಯ ಅವರ ಮನೆಯವರಿಂದ ತಿಳಿಯಿತು. ಕೂಡಲೇ ನಾವು ಆಸ್ಪತ್ರೆಗೆ ಹೋಗಿ ಅವರಿಗೆ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಮಾಡಿದೆವು. ವೈದ್ಯರು ಕೂಡ ಸ್ಪಂದಿಸಿ ತುಂಡಾಗಿದ್ದ ಬೆರಳನ್ನು ಚಿಕಿತ್ಸೆ ಮೂಲಕ ಜೋಡಿಸಿದ್ದಾರೆ. ಇದು ಮಾನವೀಯ ನೆಲೆಗಟ್ಟಿನಲ್ಲಿ ಮಾಡುವ ಒಂದು ಸೇವೆ. ನೊಂದವರಿಗೆ ನೆರವಾಗಬೇಕಿರುವುದು ಎಲ್ಲರ ಕರ್ತವ್ಯ. ಅದರಂತೆ ನಾನು ಒಂದು ಅಳಿಲು ಸೇವೆ ಮಾಡಿದ್ದೇನೆ ಅಷ್ಟೇ.
ಎಚ್.ಬಿ. ಶಿವರಾಜು, ವಕೀಲರು, ಸುಪ್ರೀಂಕೋರ್ಟ್ ಹಾಗೂ ಹೈ ಕೋರ್ಟ್