ಹುಬ್ಬಳ್ಳಿ: ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿಯವರ ಬೆದರಿಕೆಗೆ ಹೆದರಿ ಎಎಪಿಯ ಬೆಳ್ಳಂದೂರು ವಾರ್ಡ್ ಕಚೇರಿಯ ಕಟ್ಟಡದ ಮಾಲೀಕರು ಮಾತು ಬದಲಿಸಿದ್ದು, ಇಷ್ಟು ಕೀಳುಮಟ್ಟದ ರಾಜಕೀಯ ಮಾಡುವವರು ಶಾಸಕ ಸ್ಥಾನಕ್ಕೆ ಕಳಂಕ ಎಂದು ಆಮ್ ಆದ್ಮಿ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರದ ಎಎಪಿ ಅಧ್ಯಕ್ಷ ಮೋಹನ್ ದಾಸರಿ, “ಬೆಂಗಳೂರಿನಲ್ಲಿ 40ಕ್ಕೂ ಹೆಚ್ಚು ಕಚೇರಿಗಳನ್ನು ಆಮ್ ಆದ್ಮಿ ಪಾರ್ಟಿ ಹೊಂದಿದೆ. ಕೋವಿಡ್ ಹಾಗೂ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ನಮ್ಮ ಕಚೇರಿಗಳು ಜನರಿಗೆ ನಾನಾ ರೀತಿಯಲ್ಲಿ ನೆರವಾಗಿವೆ.
ಕಚೇರಿ ತೆರೆಯಲು ಕಟ್ಟಡ ನೀಡಿದ ಮಾಲೀಕರೊಂದಿಗೆ ಹಾಗೂ ಸುತ್ತಮುತ್ತಲಿನ ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಎಎಪಿ ಮುನ್ನಡೆಯುತ್ತಿದೆ. ಅದೇ ರೀತಿ, ಕಸವನಹಳ್ಳಿ ವೃತ್ತದಲ್ಲಿರುವ ಕಟ್ಟಡದಲ್ಲೂ ಮಾಲೀಕರೊಂದಿಗೆ ಚರ್ಚಿಸಿಯೇ ಕಚೇರಿ ತೆರೆಯಲಾಗಿದೆ.
ಸ್ವಾತಂತ್ರ್ಯ ದಿನದಂದು ಕಚೇರಿಯ ಎದುರು ಧ್ವಜಾರೋಹಣದ ಸಮಯದಲ್ಲಿ ಕಟ್ಟಡದ ಮಾಲೀಕರು ಉಪಸ್ಥಿತರಿದ್ದು, ಎಎಪಿಗೆ ಶುಭ ಹಾರೈಸಿದ್ದರು. ಈಗ ಬಿಜೆಪಿ ಶಾಸಕ ಲಿಂಬಾವಳಿಯವರ ಬೆದರಿಕೆಗೆ ಹೆದರಿ ಮಾಲೀಕರು ಮಾತು ಬದಲಿಸಿ, ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಆಶ್ಚರ್ಯ ಉಂಟುಮಾಡಿದೆ ಎಂದು ತಿಳಿಸಿದರು.
ಕಚೇರಿಗೆ ಕಟ್ಟಡವನ್ನು ಲೀಸ್‌ಗೆ ಪಡೆದಿರುವ ಮಹದೇವಪುರ ಕ್ಷೇತ್ರದ ಎಎಪಿ ಅಧ್ಯಕ್ಷ ಅಶೋಕ್ ಮೃತ್ಯುಂಜಯರವರು ಸಹೃದಯಿ ವ್ಯಕ್ತಿತ್ವದವರು. ಇಂಜಿನಿಯರ್ ಆಗಿ ಆರಂಕಿ ಸಂಬಳ ಪಡೆಯುತ್ತಿದ್ದ ಅಶೋಕ್, ರಾಜಕೀಯವನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಐಶಾರಾಮಿ ಜೀವನವನ್ನು ಬಿಟ್ಟು ಎಎಪಿಯೊಂದಿಗಿದ್ದಾರೆ. ಅರವಿಂದ ಲಿಂಬಾವಳಿಯವರದ್ದೂ ಸೇರಿದಂತೆ ಅನೇಕ ಅಕ್ರಮದ ವಿರುದ್ಧ ದನಿ ಎತ್ತಿದ್ದಾರೆ. ಇಂತಹ ಪ್ರಾಮಾಣಿಕ ವ್ಯಕ್ತಿತ್ವದ ಅಶೋಕ್ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಸಹಿಸಲು ಸಾಧ್ಯವಿಲ್ಲ ಎಂದು ಮೋಹನ್ ದಾಸರಿ ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಹಿರಿಯ ಮುಖಂಡರು ಹಾಗೂ ಮಾಜಿ ಶಾಸಕ ಎಚ್.ಡಿ.ಬಸವರಾಜು ಮಾತನಾಡಿ, “ಮಹದೇವಪುರ ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿಯ ಅಲೆ ಆರಂಭವಾಗಿರುವುದು ಲಿಂಬಾವಳಿಯವರ ನಿದ್ದೆಗೆಡಿಸಿದೆ. ಆದ್ದರಿಂದಲೇ ಇಂತಹ ಕೀಳುಮಟ್ಟದ ಕುತಂತ್ರ ಮಾಡುತ್ತಿದ್ದಾರೆ.
ಹಲವು ರೀತಿಯ ಅಕ್ರಮಗಳನ್ನು ಮಾಡಿ ಸಚಿವ ಸ್ಥಾನ ಕಳೆದುಕೊಂಡಿರುವ ಅವರಿಗೆ ಮುಂದಿನ ಚುನಾವಣೆಯಲ್ಲಿ ಶಾಸಕ ಸ್ಥಾನವನ್ನೂ ಕಳೆದುಕೊಳ್ಳುವ ಮುನ್ಸೂಚನೆ ಈಗಾಗಲೇ ಸಿಕ್ಕಿರಬಹುದು. ಹಾಗಾಗಿ ಇಷ್ಟೊಂದು ವಿಚಲಿತರಾಗಿ ಮಾಡಬಾರದ್ದನ್ನೆಲ್ಲ ಮಾಡುತ್ತಿದ್ದಾರೆ. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದನ್ನು ಮರೆತು ರಾಜನಂತೆ ಸರ್ವಾಧಿಕಾರದಿಂದ ಮೆರೆಯಲು ಹೊರಟಿದ್ದಾರೆ. ಶಾಸಕರ ಕಿರುಕುಳಕ್ಕೆ ಆಮ್ ಆದ್ಮಿ ಪಾರ್ಟಿ ಮಣಿಯುವುದಿಲ್ಲ. ಅವರ ಗೂಂಡಾ ವರ್ತನೆಗೆ ಕಾಲವೇ ಉತ್ತರಿಸಲಿದೆ ಎಂದು ಹೇಳಿದರು.
ಕಟ್ಟಡದ ಮಾಲೀಕರಿಗೆ ಲಿಂಬಾವಳಿಯವರು ಬೆದರಿಕೆ ಹಾಕಿದ ನಂತರ ಅನೇಕ ಸ್ಥಳೀಯ ಮಾಲೀಕರು ನಮಗೆ ಸ್ಥಳಾವಕಾಶ ನೀಡಲು ಮುಂದೆ ಬಂದಿದ್ದಾರೆ. ಮಹದೇವಪುರ ಕ್ಷೇತ್ರದಲ್ಲಿ ಲಿಂಬಾವಳಿ ವಿರೋಧಿ ಅಲೆ ಇರುವುದಕ್ಕೆ ಇದೊಂದು ನಿದರ್ಶನ. ಲಿಂಬಾವಳಿಯವರು ಕುತಂತ್ರ ಮಾಡಿದಷ್ಟೂ ಎಎಪಿ ಬಲಗೊಳ್ಳುತ್ತಾ ಸಾಗುತ್ತದೆ ಎಂದು ಮಹದೇವಪುರ ಕ್ಷೇತ್ರದ ಎಎಪಿ ಅಧ್ಯಕ್ಷ ಅಶೋಕ್ ಮೃತ್ಯುಂಜಯ ಹೇಳಿದರು.