ಬೆಂಗಳೂರು: ಕಳ್ಳರು ಜನರ ಗಮನವನ್ನು ಬೇರೆಡೆಗೆ ಸೆಳೆದು ಜೇಬಿಗೆ ಕತ್ತರಿ ಹಾಕುವಂತೆ ಬಿಜೆಪಿಯವರು ಜನರ ಗಮನವನ್ನು ದೇವಸ್ಥಾನ, ಪಾಕಿಸ್ತಾನದತ್ತ ಸೆಳೆದು ತೈಲ ಬೆಲೆ ಸೇರಿಂದತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಟೀಕಿಸಿದರು.
ಅಡುಗೆ ಅನಿಲದ ಬೆಲೆ ಏರಿಕೆ ಖಂಡಿಸಿ ಎಎಪಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಹಾಗೂ ಸಿಲಿಂಡರ್‌ನ ಅಣಕು ಶವಯಾತ್ರೆಯಲ್ಲಿ ಮಾತನಾಡಿದ ಜಗದೀಶ್ ವಿ. ಸದಂ, “ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಶೇ. 50ರಷ್ಟು ಸಬ್ಸಿಡಿಯೊಂದಿಗೆ ಕೇವಲ 400 ರೂಪಾಯಿಗೆ ಅಡುಗೆ ಅನಿಲ ಸಿಲೆಂಡರ್ ಸಿಗುತ್ತಿತ್ತು.
ಜನರು ಖರೀದಿಸುವಾಗಲೇ ಸಬ್ಸಿಡಿ ಮೊತ್ತವನ್ನು ಕಳೆದು ಮಾರಾಟ ಮಾಡಿದರೆ ಸಬ್ಸಿಡಿ ಕಡಿತಗೊಳಿಸುವುದು ಜನರ ಗಮನಕ್ಕೆ ಬರುತ್ತದೆ ಎಂದು ಯೋಚಿಸಿ ಮೋದಿ ಸರ್ಕಾರ, ಬ್ಯಾಂಕ್ ಖಾತೆಗೆ ಸಬ್ಸಿಡಿ ಮೊತ್ತವನ್ನು ಹಾಕಲು ಆರಂಭಿಸಿತು. ನಂತರ ಹಂತಹಂತವಾಗಿ ಸಬ್ಸಿಡಿ ಮೊತ್ತವನ್ನು 400ರಿಂದ ಸೊನ್ನೆಗೆ ಇಳಿಸಿತು. ಈಗ ಪದೇಪದೇ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡ ಹಾಗೂ ಮಧ್ಯಮ ವರ್ಗದವರು ಸಾಯುವಂತೆ ಮಾಡಿ, ಭಾರತದಲ್ಲಿ ಶ್ರೀಮಂತರನ್ನಷ್ಟೇ ಉಳಿಸಿಕೊಂಡು ಭಾರತವನ್ನು ವಿಶ್ವಗುರು ಮಾಡಲು ಬಿಜೆಪಿ ನಿರ್ಧರಿಸಿದಂತಿದೆ. ಆದ್ದರಿಂದಲೇ ಬೆಲೆ ಏರಿಕೆ ಮಾಡಿ ಸಾಮಾನ್ಯ ಜನರ ಬದುಕನ್ನು ಹೈರಾಣಾಗಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ ಸಿಲಿಂಡರ್ ದರವನ್ನು ಬರೋಬ್ಬರಿ 265 ರೂಪಾಯಿ ಏರಿಕೆ ಮಾಡಲಾಗಿದೆ.
ಕೋವಿಡ್, ಲಾಕ್‌ಡೌನ್‌ನಿಂದಾಗಿ ಹಲವು ತಿಂಗಳುಗಳ ಕಾಲ ದುಡಿಮೆಯಿಲ್ಲದೇ ಜನರು ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅಗತ್ಯ ವಸ್ತುಗಳಿಗೆ ಸಬ್ಸಿಡಿ ನೀಡಿ ಅವರಿಗೆ ನೆರವಾಗಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯ. ಆದರೆ ಈಗ ಬೆಲೆ ಏರಿಕೆ ಮಾಡಿ ಅವರ ಜೀವನದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.
ಗ್ರಾಮೀಣ ಭಾಗದ ಬಡ ಜನರು ಕಟ್ಟಿಗೆ ಒಲೆ, ಇದ್ದಿಲು ಒಲೆ ಬಳಸಿ ಆರಾಮಾಗಿ ಜೀವನ ಸಾಗಿಸುತ್ತಿದ್ದರು. ಮೋದಿ ಸರ್ಕಾರ ಉಜ್ವಲ ಯೋಜನೆ ಹೆಸರಿನಲ್ಲಿ ಉಚಿತ ಗ್ಯಾಸ್ ಸಂಪರ್ಕ ನೀಡಿತು. ಸರ್ಕಾರವನ್ನು ನಂಬಿ ಅವರು ಕಟ್ಟಿಗೆ, ಇದ್ದಿಲು ಒಲೆಗಳಿಗೆ ವಿದಾಯ ಹೇಳಿದರು. ಈಗ ಗ್ಯಾಸ್ ಬೆಲೆಯನ್ನು ವಿಪರೀತ ಏರಿಕೆ ಮಾಡಿದರೆ ಅವರ ಗತಿ ಏನು ಎಂದು ಪ್ರಶ್ನಿಸಿದರು.
ಬೇರೆ ಪಕ್ಷಗಳ ಸರ್ಕಾರವಿದ್ದಾಗ ಎಲ್‌ಪಿಜಿ ಸಿಲಿಂಡರ್ ಬೆಲೆ ಒಂದು ರೂಪಾಯಿ ಏರಿಕೆಯಾದರೂ ಬಿಜೆಪಿ ನಾಯಕರು ಬೀದಿಗಿಳಿದು ಬಾಯಿ ಬಡಿದುಕೊಂಡು ಪ್ರತಿಭಟನೆ ಮಾಡುತ್ತಿದ್ದರು. ಈಗ ನೂರಾರು ರೂಪಾಯಿ ಏರಿಕೆಯಾಗಿದ್ದರೂ ಅವರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಅಧಿಕಾರದಲ್ಲಿ ಇಲ್ಲದಿದ್ದಾಗ ಒಂದು ನಿಲುವು, ಅಧಿಕಾರ ಸಿಕ್ಕಾಗ ಮತ್ತೊಂದು ನಿಲುವು ತಳೆಯುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು ಎಂದು ಜಗದೀಶ್ ವಿ. ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎಎಪಿ ಮುಖಂಡರಾದ ವಿ.ಜೋತೀಶ್ ಕುಮಾರ್, ಗೋಪಿನಾಥ್, ಪುಷ್ಪಾ ಕೇಶವ್, ಉಮರ್ ಷರೀಫ್, ಉಸ್ಮಾನ್, ವೀಣಾ ಸೆರ್ರಾವ್ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.