ಬೆಂಗಳೂರು: ಫುಡ್ ಪ್ರಾಡಕ್ಟ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡು ಇಬ್ಬರು ಮೃತಪಟ್ಟಿದ್ದು ಮೂವರು ಗಾಯಗೊಂಡಿರುವ ಘಟನೆ ನಗರದ ಮಾಗಡಿ ರಸ್ತೆಯ 5ನೇ ಕ್ರಾಸ್ ನಲ್ಲಿ ಸಂಭವಿಸಿದೆ.
ಇಂದು ಮಧ್ಯಾಹ್ನ 1.30ರ ಸುಮಾರಿಗೆ ವಿಜಯ್ ಮೆಹ್ತಾ ಒಡೆತನದ ಸ್ನ್ಯಾಕ್ಸ್ ತಿಂಡಿ ಪದಾರ್ಥ ತಯಾರಿ ಮಾಡುವ ಎಂಎಂ ಫುಡ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅವಘಡದಲ್ಲಿ ಸೌರಭ್ ಮತ್ತು ಮನೀಶ್ ಮೃತಪಟ್ಟಿದ್ದಾರೆ. ಈ ಇಬ್ಬರೂ ಬಿಹಾರ ಮೂಲದವರು ಎನ್ನಲಾಗಿದೆ. ಘಟನೆಯಲ್ಲಿ ಸಚಿನ್, ಶಾಂತಿ ಹಾಗೂ ಧನಲಕ್ಷ್ಮಿ ಎಂಬವರಿಗೆ ಗಾಯಗಳಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ದಾವಿಸಿವೆ. ಹಾಗೆಯೇ ಡಿಸಿಪಿ ಸಂಜೀವ್ ಪಾಟೀಲ್ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ವೇಳೆ ಫ್ಯಾಕ್ಟರಿ ಒಳಗಡೆ ಒಟ್ಟು 7 ಮಂದಿ ಕೆಲಸ ಮಾಡುತ್ತಿದ್ದರು. ಮಾಗಡಿ ರೋಡ್ ನಲ್ಲಿ ಇದ್ದ ಫ್ಯಾಕ್ಟರಿಗೆ ಈ ಹಿಂದೆಯೂ ಬೆಂಕಿ ಅವಘಡ ಸಂಭವಿಸಿತ್ತು. ಅಲ್ಲಿಂದ ಇಲ್ಲಿಗೆ ಫ್ಯಾಕ್ಟರಿಯನ್ನು ಶಿಫ್ಟ್ ಮಾಡಲಾಗಿತ್ತು. ಇಲ್ಲಿಗೆ ಶಿಪ್ಟ್ ಆಗಿ ಮೂರು ತಿಂಗಳಾಗಿದೆ. ಚಿಪ್ಸ್, ಚಕ್ಕುಲಿ, ಮಿಕ್ಷರ್ ಸೇರಿದಂತೆ ಬೇಕರಿ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಪಕ್ಕದಲ್ಲೇ ಶಾಲೆ ಕೂಡ ಇದೆ.
ಸದ್ಯ ಪೊಲೀಸರು ಎಫ್‍ಎಸ್‍ಎಲ್‍ಟೀಂಗೆ ಸ್ಫೋಟದ ಬಗ್ಗೆ ಮಾಹಿತಿ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ತಂಡ ಫ್ಯಾಕ್ಟರಿಗೆ ಭೇಟಿ ಕೊಟ್ಟಿದ್ದು, ಬಾಯ್ಲರ್ ಸ್ಫೋಟಕ್ಕೆ ಕಾರಣ ಏನು ಎಂಬ ಶೋಧನೆಯಲ್ಲಿ ತೊಡಗಿದೆ.