ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮೂಲಕ ದೊಡ್ಡ ಬದಲಾವಣೆ ಆಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಯಶಸ್ವಿಯಾದರೆ, ಆಗಸ್ಟ್ 23 ಎಜುಕೇಷನ್ ಡೇ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿ ಅವರು, ಸಪ್ಟೆಂಬರ್ 5 ರಂದು ಹೇಗೆ ಶಿಕ್ಷಕರ ದಿನಾಚರಣೆ ಮಾಡ್ತೇವೋ ಹಾಗೇ ಶಿಕ್ಷಣದಲ್ಲಿ ಕ್ರಾಂತಿ ಆದರೆ ಆಗಸ್ಟ್ 23 ರಂದು ರಾಷ್ಟ್ರೀಯ ಶಿಕ್ಷಣ ನೀತಿ ದಿನಾಚರಣೆ ಆಗಲಿದೆ. ನರೇಂದ್ರ ಮೋದಿ ದೂರದೃಷ್ಟಿ ಇರುವ ಮುತ್ಸದ್ಧಿ. ಅವರ ದೂರದೃಷ್ಟಿಯ ಫಲ ಈ ರಾಷ್ಟ್ರೀಯ ಶಿಕ್ಷಣ ನೀತಿ ಎಂದು ತಿಳಿಸಿದರು.
ಇನ್ನು ಒಬ್ಬ ರಾಜಕಾರಣಿಗೆ ಮುಂದಿನ ಚುನಾವಣೆ ಮೇಲೆ ಗಮನ ಇರುತ್ತದೆ. ಆದ್ರೆ ಒಬ್ಬ ಮುತ್ಸದ್ಧಿಗೆ ಮುಂದಿನ ಜನಾಂಗದ ಮೇಲೆ ಗಮನ ಇರುತ್ತದೆ. ಕರ್ನಾಟಕದಲ್ಲಿ ಡಿಜಿಟಲೀಕರಣ ಹೊಸ ನೀತಿಯನ್ನು ಜಾರಿಗೆ ತರುತ್ತೇವೆ ಎಂದು ಬೊಮ್ಮಾಯಿ ಹೇಳಿದರು.
ರಾಜ್ಯದಲ್ಲಿ ಡಿಜಿಟಲೀಕರಣ ಹೊಸ ನೀತಿ ಜಾರಿಗೆ ತರುತ್ತೇವೆ. ಮೊದಲು ಜ್ಞಾನ, ನಂತರ ವಿಜ್ಞಾನ, ಬಳಿಕ ತಂತ್ರಜ್ಞಾನ. ಆದರೆ ಈಗ ತಂತ್ರಾಂಶ ಜ್ಞಾನ ಮುಂಚೂಣಿಯಲ್ಲಿ ಇದೆ. ಹಾಗಾಗಿ ಡಿಜಿಟಲೈಸೇಷನ್ ಈಗ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಕಾಕತಾಳೀಯವೋ ಏನೋ ಗೊತ್ತಿಲ್ಲ. ಕೋವಿಡ್ ನಿಂದ ಶಾಲೆಗಳು ತೆರೆಯಲು ಆಗಿರಲಿಲ್ಲ. ಇವತ್ತು ಶಾಲೆಗಳಿಗೆ ಮಕ್ಕಳು ಬಂದಿದ್ದಾರೆ. ಇನ್ನೊಂದೆಡೆ ಇವತ್ತು ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ದಿನ. ಈ ಎರಡು ಕಾರಣಗಳಿಂದಾಗಿ ಇವತ್ತು ಲಿಬರೇಷನ್ ಡೇ . ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಯಶಸ್ವಿಯಾದ್ರೆ ಆಗಸ್ಟ್ 23 ಎಜ್ಯುಕೇಶನ್ ಡೇ ಆಗಲಿದೆ ಎಂದರು.
ಭವಿಷ್ಯವನ್ನು ಕಟ್ಟುವ ಕೆಲಸ ಮಾಡಲಾಗಿದೆ. ಇಡೀ ದೇಶದಲ್ಲೇ ಅಮೂಲ್ಯ ಬದಲಾವಣೆ ಆಗಿದೆ. ಜಡ್ಡುಗಟ್ಟಿದ್ದ ವ್ಯವಸ್ಥೆಗೆ ಲಿಬರೇಷನ್ ಸಿಕ್ಕಿದೆ ಎಂದು ಸಿಎಂ ಅಭಿಪ್ರಾಯಪಟ್ಟರು.
ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಐಪಾಡ್: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಐಪಾಡ್ ಒದಗಿಸುತ್ತೇವೆ. ನನ್ನ ಕರ್ನಾಟಕ ಜ್ಞಾನವಂತ ರಾಜ್ಯವಾಗಬೇಕು. ಆಗ ಮಾತ್ರ ಕರ್ನಾಟಕ ಕಲ್ಯಾಣ ಕರ್ನಾಟಕ ಆಗಲಿದೆ ಎಂದರು.
ಇನ್ನು ಕೊರೊನಾ ಸಂಕಷ್ಟದಿಂದ ಸರ್ಕಾರಕ್ಕೆ ಆರ್ಥಿಕ ಸಮಸ್ಯೆ ಇದೆ. ಆದರೆ ಹೊಸ ಯೋಜನೆಗಳಿಗೆ ಯಾವುದೇ ಸಮಸ್ಯೆ ಆಗಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಶಿಕ್ಷಣಕ್ಕೆ ಮುಂದಿನ ಬಜೆಟ್‌ನಲ್ಲಿ ಹೆಚ್ಚು ಅನುದಾನ ಮೀಸಲಿಡುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.