ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ಸಂಸ್ಥೆಗಳಲ್ಲಿ ಬಿಎಂಟಿಸಿ ಹೊರತು ಪಡಿಸಿ ಉಳಿದ ಮೂರು ಸಂಸ್ಥೆಗಳ ಅಧಿಕಾರಿಗಳು/ ಸಿಬ್ಬಂದಿಯ ಜುಲೈ ತಿಂಗಳ ವೇತನಕ್ಕಾಗಿ ಶೇ.25ರಷ್ಟು ಅನುದಾನವನ್ನು ಸೋಮವಾರ ಸರ್ಕಾರ ಬಿಡುಗಡೆ ಮಾಡಿ ಆದೇಶಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿ, ಸಿಬ್ಬಂದಿಗಳ ಜುಲೈ 2021ರ ಮಾಹೆಯ ವೇತನ ವೆಚ್ಚಕ್ಕಾಗಿ ಮೂಲ ವೇತನ/ತುಟ್ಟಿ ಭತ್ಯೆಯ ಶೇ.25ರಷ್ಟನ್ನು 2021 -22 ನೇ ಸಾಲಿನ ಆಯವ್ಯಯದ ಸಹಾಯಧನದಡಿ ಒದಗಿಸಿರುವ ಅನುದಾನದಡಿ ಒಟ್ಟಾರೆ 60.82 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿ ಆದೇಶಿಸಿದೆ.
60.82 ಕೋಟಿ ರೂ.ಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 27.74 ಕೋಟಿ ರೂ., ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 17.47ಕೋಟಿ ರೂ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನಿಗಮಕ್ಕೆ15. 61 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ.
ಇನ್ನು ಇಂದು ಬಿಡುಗಡೆ ಮಾಡಲಾದ ಅನುದಾನವನ್ನು 3 ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು, ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಬೆಂಗಳೂರು ಇವರಿಂದ ಪೇಯೀಸ್ ರಶೀದಿ ಮೇಲು ರುಜು ಪಡೆದು ರಾಜ್ಯ ಹುಜೂರು ಖಜಾನೆಯಿಂದ ಡ್ರಾ ಮಾಡಲು ಅನುಮತಿ ನೀಡಿದೆ.
ಕೊರೊನಾ ವೈರಸ್ ರೋಗದ ಎರಡನೇ ತೀವ್ರತೆಯ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳ ನೌಕರರಿಗೆ ಜುಲೈ 2021ರ ವೇತನ ಪಾವತಿಸಲು ಅನುದಾನವನ್ನು ಬಿಡುಗಡೆ ಮಾಡುವಂತೆ ನಾಲ್ಕೂ ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದಿದ್ದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಇಂಧನ ದರದಲ್ಲಿ ಹೆಚ್ಚಳ ಮತ್ತು ಕೊರೊನಾ ಹಿನ್ನೆಲೆಯಲ್ಲಿ ಬಸ್ ಕಾರ್ಯಾಚರಣೆಯಿಂದ ನಿರೀಕ್ಷಿತ ಆದಾಯ ಸಂಗ್ರಹ ವಾಗದಿರುವುದರಿಂದ ಜುಲೈ 2021ರ ಮಾಹೆಯ ಅಧಿಕಾರಿ, ಸಿಬ್ಬಂದಿಗಳಿಗೆ ವೇತನ ಪಾವತಿಸಲು ಕೊರತೆ ಯಾಗಿರುವ ಅನುದಾನದ ಮೊತ್ತ 110 ಕೋಟಿ ರೂ.ಗಳು ಮತ್ತು 52.52 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು.
ಅದರಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಕೂಡ ಸಿಬ್ಬಂದಿ, ಅಧಿಕಾರಿಗಳ ಜುಲೈ 2021 ರಿಂದ ಸೆಪ್ಟೆಂಬರ್ 2021 ರವರೆಗಿನ ವೇತನ ಪಾವತಿ ಮಾಡಲು ಅವಶ್ಯವಿರುವ ಅನುದಾನದ ಮೊತ್ತ ಕ್ರಮವಾಗಿ 284.14 ಕೋಟಿ ರೂ. ಮತ್ತು 193 ಕೋಟಿ ರೂ. ಒಟ್ಟಾರೆಯಾಗಿ 641.61 ಕೋಟಿ ರೂಗಳ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು.
ಈ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಪ್ರಸ್ತಾವನೆಯನ್ನು ಸರಕಾರ ಪರಿಶೀಲಿಸಿ ಮೂರು ಸಾರಿಗೆ ನಿಗಮಗಳಿಗೆ ಶೇ.25ರಷ್ಟು ವೇತನ ವೆಚ್ಚಕ್ಕಾಗಿ 60.82 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಆದೇಶಿಸಿದೆ.