ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳು/ ಸಿಬ್ಬಂದಿಯ ಜುಲೈ ತಿಂಗಳ ವೇತನಕ್ಕಾಗಿ ಶೇ.50ರಷ್ಟು ಅನುದಾನವನ್ನು ಸೋಮವಾರ ಸರ್ಕಾರ ಬಿಡುಗಡೆ ಮಾಡಿ ಆದೇಶಿಸಿದೆ.
ಬಿಎಂಟಿಸಿ ಅಧಿಕಾರಿ, ಸಿಬ್ಬಂದಿಗಳ ಜುಲೈ 2021ರ ಮಾಹೆಯ ವೇತನ ವೆಚ್ಚಕ್ಕಾಗಿ ಮೂಲ ವೇತನ/ತುಟ್ಟಿ ಭತ್ಯೆಯ ಶೇ.50ರಷ್ಟನ್ನು 2021 -22 ನೇ ಸಾಲಿನ ಆಯವ್ಯಯದ ಸಹಾಯಧನದಡಿ ಒದಗಿಸಿರುವ ಅನುದಾನದಡಿ 49.31 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿ ಆದೇಶಿಸಿದೆ.
ಇನ್ನು ಇಂದು ಬಿಡುಗಡೆ ಮಾಡಲಾದ ಅನುದಾನವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಬೆಂಗಳೂರು ಇವರಿಂದ ಪೇಯೀಸ್ ರಶೀದಿ ಮೇಲು ರುಜು ಪಡೆದು ರಾಜ್ಯ ಹುಜೂರು ಖಜಾನೆಯಿಂದ ಡ್ರಾ ಮಾಡಲು ಅನುಮತಿ ನೀಡಿದೆ.
ಕೊರೊನಾ ವೈರಸ್ ರೋಗದ ಎರಡನೇ ತೀವ್ರತೆಯ ಹಿನ್ನೆಲೆಯಲ್ಲಿ ಬಿಎಂಟಿಸಿ ನೌಕರರಿಗೆ ಜುಲೈ 2021ರ ವೇತನ ಪಾವತಿಸಲು ಅನುದಾನವನ್ನು ಬಿಡುಗಡೆ ಮಾಡುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದಿದ್ದರು.
ಸಿಬ್ಬಂದಿ, ಅಧಿಕಾರಿಗಳ ಜುಲೈ 2021 ರಿಂದ ಸೆಪ್ಟೆಂಬರ್ 2021 ರವರೆಗಿನ ವೇತನ ಪಾವತಿ ಮಾಡಲು ಅವಶ್ಯವಿರುವ ಅನುದಾನದ ಮೊತ್ತ ಕ್ರಮವಾಗಿ 284.14 ಕೋಟಿ ರೂ. ಗಳ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಸಂಸ್ಥೆ ಎಂಡಿ ಪ್ರಸ್ತಾವನೆ ಸಲ್ಲಿಸಿದ್ದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕರ ಪ್ರಸ್ತಾವನೆಯನ್ನು ಸರಕಾರವು ಪರಿಶೀಲಿಸಿ ಶೇ.50ರಷ್ಟು ವೇತನ ವೆಚ್ಚಕ್ಕಾಗಿ 49.31 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.