ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ವೃದ್ಧರೊಬ್ಬರು ಕೋವಿಶೀಲ್ಡ್ ಲಸಿಕೆ ಪಡೆದ 8 ದಿನಗಳ ಬಳಿಕ ಮೃತಪಟ್ಟಿದ್ದು, ಲಸಿಕೆಯ ಅಡ್ಡಪರಿಣಾಮದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಹೆಗ್ಗಡಹಳ್ಳಿ ಗ್ರಾಮದ ನಿವಾಸಿ ಮಹದೇವಯ್ಯ (64) ಮೃತಪಟ್ಟವರು.
ನಮ್ಮ ತಂದೆಗೆ ಬಿಪಿ, ಶುಗರ್ ಇರಲಿಲ್ಲ. ಆಗಸ್ಟ್ 19 ರಂದು ಗ್ರಾಮದಲ್ಲಿ ಕೋವಿಶೀಲ್ಡ್ ಎರಡನೇ ಲಸಿಕೆಯನ್ನು ಪಡೆದ ನಂತರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಲಸಿಕೆಯಿಂದ ಉಂಟಾಗಿದ್ದ ಅನಾರೋಗ್ಯ ಸಮಸ್ಯೆಗೆ ಗುರುವಾರ (ಆ.26) ಹೆಗ್ಗಡಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಾಗ ಮೈಕೈ ನೋವಿಗೆ ಇಂಜೆಕ್ಸನ್ ಮಾಡಿ, ಮಾತ್ರೆಯನ್ನು ಕೊಟ್ಟು ಮನೆಗೆ ಕಳುಹಿಸಿದ್ದರು.
ಶುಕ್ರವಾರ ಬೆಳಗ್ಗೆ 7ರ ವೇಳೆಯಲ್ಲಿ ಸ್ವಲ್ಪ ಹೊತ್ತು ಬಿಟ್ಟು ಎದ್ದೇಳುತ್ತೇನೆ ಎಂದು ಹೇಳಿ ಮಲಗಿದವರು ನಂತರ ಮೇಲೆಳಲೇ ಇಲ್ಲ. ಲಸಿಕೆಯ ಅಡ್ಡಪರಿಣಾಮದಿಂದಲೇ ನಮ್ಮ ತಂದೆ ಮೃತಪಟ್ಟಿದ್ದಾರೆ ಎಂದು ಮೃತ ಮಹದೇವಯ್ಯ ಅವರ ಪುತ್ರಿ ಸೌಮ್ಯ ಹೆಗ್ಗಡಹಳ್ಳಿ ಆರೋಪಿಸಿದ್ದಾರೆ.
ಘಟನೆ ನಂತರ ಹೆಗ್ಗಡಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಶಶಿರೇಖಾ ಅವರು ಮೃತರ ಮನೆಗೆ ಭೇಟಿ ನೀಡಿದರು. ನಮ್ಮ ಕಡೆಯಿಂದ ಏನು ತಪ್ಪಾಗಿಲ್ಲ ಎಂದು ಹೇಳಿದ್ದಾರೆ.
ಇನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ ಈ ಕುರಿತು ಪ್ರತಿಕ್ರಿಯಿಸಿದ್ದು, ಮಹದೇವಯ್ಯ ವಾರದ ಹಿಂದೆ ಲಸಿಕೆ ಪಡೆದಿದ್ದಾರೆ. ಅಡ್ಡಪರಿಣಾಮ ಬೀರುವುದಿದ್ದರೆ ಲಸಿಕೆ ಹಾಕಿಸಿಕೊಂಡ ಎರಡ್ಮೂರು ದಿನಗಳಲ್ಲಿ ಸಮಸ್ಯೆಯಾಗಬೇಕಿತ್ತು. ಆದರೆ ಈಗ ವ್ಯಾಕ್ಸಿನ್ ಅಡ್ಡ ಪರಿಣಾಮದಿಂದ ಸತ್ತಿದ್ದಾರೆ ಎಂದು ಹೇಳಲಾಗದು ಎಂದು ಹೇಳಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರಿ, ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಶುಕ್ರವಾರ ಗ್ರಾಮದಲ್ಲಿ ನೆರವೇರಿತು.