ಮೈಸೂರು: ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಮಂದಿಯಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದು, ಆ ಆರೋಪಿಗಳ ಅರೆಸ್ಟ್ ಮಾಡಿದ ಪೊಲೀಸರ ತಂಡಕ್ಕೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಡಿಜಿಪಿ ಪ್ರವೀಣ್ ಸೂದ್ ಘೋಷಿಸಿದ್ದಾರೆ.
ನಗರದಲ್ಲಿ ಶನಿವಾರ ಮಧ್ಯಾಹ್ನ ನಡೆದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿಗಳನ್ನು ಬಂಧಿಸಿರುವುದರ ಬಗ್ಗೆ ಗೃಹ ಸಚಿವರಿಗೆ ವಿಷಯ ತಿಳಿಸಿದಾಗ ಸಚಿವರು ಮೊದಲು ನಮ್ಮ ಪೊಲೀಸರ ತಂಡಕ್ಕೆ ಬಹುಮಾನ ಘೋಷಿಸಿ ಎಂದು ತಿಳಿಸಿದರು. ಅದರಂತೆ ಪೊಲೀಸರ ತಂಡಕ್ಕೆ 5 ಲಕ್ಷ ಬಹುಮಾನ ನೀಡುವುದಾಗಿ ಹೇಳಿದರು.
20 ಗಂಟೆಯಲ್ಲಿ ಎರಡುಯ ಬಾರಿ ಪ್ರೆಸ್ ಮಿಟ್ ಮಾಡುವ ಸಂದರ್ಭ ಇದೇ ಮೊದಲ ಬಾರಿಗೆ ನನಗೆ ಬಂದಿದೆ. ಆ.23ರಂದು ನಡೆದಿದ್ದ ಪ್ರಕರಣ ಸಂಬಂಧ ಕಾರ್ಯಾಚರಣೆ ಯಶಸ್ವಿಯಾಗಿದೆ. ಆ. 24 ರಂದು ಬಹಳ ದುಃಖದ ಘಟನೆ ನಡೆದಿದೆ. ಹೇಳಕ್ಕೂ ಆಗದಂತಹ ದುಃಖದ ಘಟನೆ ಇದಾಗಿದೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೊದಲೇ ದರೋಡೆ ಮಾಡುತ್ತಿದ್ದ ಆರೋಪಿಗಳು ಈ ಜೋಡಿ ಬಳಿ ಬಂದು 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಅದು ಸಾಧ್ಯವಾಗದಿದ್ದಾಗ ಕೃತ್ಯ ಎಸಗಿ ಪರಾರಿಯಾಗಿದ್ದರು. ಇದು ನಮ್ಮ ಪೊಲೀಸ್ ತಂಡಕ್ಕೆ ಒಂದು ಸವಾಲಾಗಿತ್ತು. ಕಾರಣ ಆರೋಪಿಗಳ ಬಗ್ಗೆ ಯಾರಿಗೂ ಮಾಹಿತಿ ಇಲ್ಲದಿರುವುದು. ಹೀಗಾಗಿ ಇದೊಂದು ವಿಜ್ಞಾನ ತಂತ್ರಜ್ಞಾನ ಆಧಾರಿತವಾಗಿ ಆರೋಪಿಗಳ ಬಂಧಿಸಬೇಕಾದ ಪ್ರಕರಣವಾಗಿತ್ತು.
ಇಇನ್ನು ದಕ್ಷಿಣ ವಲಯ ಐಜಿ ಹಾಗೂ ಕಮಿಷನರ್ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವಿಶೇಷವಾಗಿ ಈ ಘಟನೆಯಲ್ಲಿ ಸಂತ್ರಸ್ತೆ ಇದೂವರೆಗೂ ಯಾವುದೇ ಹೇಳಿಕೆ ನೀಡಿಲ್ಲ. ಆಕೆಯ ಗೆಳೆಯ ಸ್ವಲ್ಪ ಮಾಹಿತಿ ನೀಡಿದ್ದಾರೆ. ಆದರೂ ಇದು ಕೂಡ ಅಸ್ಪಷ್ಟವಾಗಿತ್ತು. ನಿನ್ನೆ ಮೊನ್ನೆ ಸಾಕಷ್ಟು ಸಾರ್ವಜನಿಕರಿಂದ ಸಲಹೆಗಳು ಸಿಕ್ಕಿದ್ದು ಅದು ಪ್ರಯೋಜನಕ್ಕೆ ಬಂದಿದೆ ಎಂದು ಹೇಳಿದರು.
ಇದು ಖುಷಿಯ ವಿಚಾರ ಅಲ್ಲ. ಆದರೆ ಈ ಕೇಸಿನಲ್ಲಿ ಐದು ಮಂದಿಯನ್ನು ಅರೆಸ್ಟ್ ಮಾಡಿದ್ದೇವೆ. ಈ 5 ಮಂದಿ ಯಾರೆಂಬುದನ್ನು ಕೋರ್ಟ್ ಆದೇಶದಂತೆ ಬಹಿರಂಗಪಡಿಸಲ್ಲ. ಆರೋಪಿಗಳೆಲ್ಲರೂ ಕೂಲಿ ಕಾರ್ಮಿಕರು ಆಗಿದ್ದಾರೆ. ಇನ್ನೂ ತನಿಖೆ ನಡೆಸಿ ಮಾಹಿತಿ ತಿಳಿಸಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಇದು ಸಾಧ್ಯವಿಲ್ಲ.
ಪ್ರಾಥಮಿಕ ಮೂಲಗಳ ಪ್ರಕಾರ ಓರ್ವ ಅಪ್ರಾಪ್ತ(17 ವರ್ಷ) ಎಂಬುದಾಗಿ ತಿಳಿದುಬಂದಿದೆ. ಕೆಲಸಕ್ಕೋಸ್ಕರ ಕೆಲ ಸಲ ಮೈಸೂರಿಗೆ ಬರುತ್ತಿದ್ದರು. ಹೀಗೆ ಬಂದು ಹೋಗುವ ಮುನ್ನ ಕುಡಿದು ಪಾರ್ಟಿ ಮಾಡಿ ಹೋಗುತ್ತಿದ್ದರು ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ ಎಂದು ವಿವರಿಸಿದರು.
ಇನ್ನು ಪೊಲೀಸರ ತಂಡದ ಎಲ್ಲರಿಗೂ ಧನ್ಯವಾದ ಹೇಳಲೇಬೇಕು. ಇಂತಹ ಪ್ರಕರಣವನ್ನು ಪತ್ತೆ ಮಾಡಲು ಸಮಯ ಬೇಕಾಗುತ್ತದೆ. ಆರೋಪಿಗಳು ಗೊತ್ತಿದ್ದರೆ 4 ಗಂಟೆಯೂ ಕಾಯಬೇಕಿಲ್ಲ. ಆದರೆ ಈ ರೀತಿಯ ಘಟನೆಗಳಲ್ಲಿ ವೈಜ್ಞಾನಿಕ ಹಾಗೂ ತಂತ್ರಜ್ಞಾನ ಮೂಲಕ ಪತ್ತೆ ಕಾರ್ಯ ನಡೆಸಬೇಕಾಗುತ್ತದೆ ಎಂದು ಹೇಳುವ ಮೂಲಕ ಆರೋಪಿಗಳ ಪತ್ತೆ ತಡಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ಆರೋಪಕ್ಕೆ ಡಿಜಿಪಿ ಸ್ಪಷ್ಟನೆ ನೀಡಿದರು.