ಬೆಂಗಳೂರು: ಗೋವಿಂದಪುರ ಡ್ರಗ್ಸ್ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದ್ದು. ಡ್ರಗ್ ಪೆಡ್ಲರ್ ಥಾಮಸ್ ಕುಲು ಜತೆ ಸಂಪರ್ಕ ಇದ್ದ ವಿವಿಧ ಸೆಲಬ್ರಿಟಿಗಳು, ಉದ್ಯಮಿಗಳ ಮನೆಗಳ ಮೇಲೆ ಪೊಲೀಸರು ಸೋಮವಾರ ಬೆಳಗ್ಗೆ ದಾಳಿ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಹೆಸರೆಂದರೇ ಉದ್ಯಮಿ ಸೋನಿಯಾ ಅಗರ್ವಾಲ್. ಯಾರು ಈ ಶ್ರೀಮಂತ ಉದ್ಯಮಿ, ಇವಳಿಗೂ ಡ್ರಗ್ ಜಾಲಕ್ಕೂ ಇರುವ ನಂಟೇನು, ಸೋನಿಯಾ ಹಿನ್ನೆಲೆ ಹಾಗೂ ಪ್ರಕರಣದ ಕುರಿತು ಇಲ್ಲಿದೆ ಕಂಪ್ಲೀಟ್ ವರದಿ.
ಶ್ರೀಮಂತ ಕುಟುಂಬದಿಂದ ಬಂದಿರುವ ಸೋನಿಯಾ ಅಗರ್ವಾಲ್, Burberry perfumes, ಬರ್ಬೇರ್ರಿ ಆರ್ಗಾನಿಕ್ ಕಾಸ್ಮಾಟಿಕ್ಸ್ ಉದ್ದಿಮೆ ನಡೆಸುತ್ತಿದ್ದಾಳೆ. 2004 ರಲ್ಲಿ ಬೆಂಗಳೂರಿನ ವಿದ್ಯಾಶಿಲ್ಪ ಅಕಾಡೆಮಿಯಲ್ಲಿ ಪ್ರೈಮರಿ ಹಾಗೂ ಹೈಸ್ಕೂಲ್ ಮುಗಿಸಿರುವ ಸೋನಿಯಾ, ಆನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ 2013 ರರಲ್ಲಿ ಕ್ಯಾಲಿಫೋರ್ನಿಯಾಕ್ಕೆ ತೆರಳಿದ್ದಳು.
ಹಲ್ಟ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಕಾಲೇಜು ವಿದ್ಯಾಭ್ಯಾಸ ಹಾಗೂ 2015 ರಲ್ಲಿ ಕ್ಯಾಲಿಫೋರ್ನಿಯಾದ ನಾರ್ತ್ ವೆಸ್ಟರ್ನ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪದವಿಗಳಿಸಿದ ಬಳಿಕ ಮತ್ತೆ 2016 ರಲ್ಲಿ ಬೆಂಗಳೂರಿಗೆ ವಾಪಸ್ ಆದ ಸೋನಿಯಾ ತನ್ನದೇ ಆದ ಸ್ವಂತ ಉದ್ದಿಮೆ ಸ್ಥಾಪಿಸಬೇಕು ಎನ್ನುವ ಹಂಬಲ ಹೊಂದಿದ್ದ ಹೆಣ್ಣು ಮಗಳು.
ಭಾರತಕ್ಕೆ ಮರಳಿ ವರ್ಷವಾದ 2016 ರಲ್ಲಿಯೇ Burberry perfumes ಹಾಗೂ ಆರ್ಗಾನಿಕ್ ಕಾಸ್ಮೆಟಿಕ್ ಬಿಸಿನೆಸ್ ಗಿಳಿದಿದ್ದ ಸೋನಿಯಾ ಈ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಳು.
ಮಾದಕ ವಸ್ತು ಸರಬರಾಜು ಹಾಗೂ ಸೇವಿಸುವವರ ಜಾಲ ತಿಳಿದ ತಕ್ಷಣ ಕಾರ್ಯಪ್ರವೃತತರಾಗಿದ್ದ ಪೊಲೀಸರು ಒಂದಷ್ಟು ಜನರನ್ನು ಬಂಧಿಸಿದ್ದರು. ಅದರಂತೆ ಸೋನಿಯಾ ಹಿಂದೆ ಬಿದ್ದಿದ್ದ ಪೊಲೀಸರು ಅವಳ ಬಗ್ಗೆ ಮಾಹಿತಿ ಕಲೆಹಾಕ ತೊಡಗಿದ್ದರು.
ಭಾನುವಾರ ಮದ್ಯರಾತ್ರಿ 1:30 ಕ್ಕೆ ಮನೆಬಿಟ್ಟಿದ್ದ ಸೋನಿಯಾ ಅಗರ್ವಾಲ್, ಯುಬಿ ಸಿಟಿಯಲ್ಲಿ ನಡೆಯುತ್ತಿದ್ದ ಮಿಡ್ ನೈಟ್ ಪಾರ್ಟಿಗೆ ತನ್ನ ಸ್ನೇಹಿತನೊರ್ವನ ಜೊತೆ ಹೋಗಿ ಅಲ್ಲಿ ಬೆಳಗಿನ ಜಾವದವರೆಗೂ ಕಾಲ ಕಳೆದಿದ್ದಾರೆ. ಪಾರ್ಟಿ ಬಳಿಕ ಖಾಸಗಿ ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಸೋನಿಯಾ ಪೊಲೀಸರು ಎಂಟ್ರಿ ಕೊಡುತ್ತಿದ್ದಂತೆ ಹೈಡ್ರಾಮ ಮಾಡಲು ಶುರು ಮಾಡಿದ್ದಾಳೆ.
ಪುರುಷರ ಟಾಯ್ಲೆಟ್ ನಲ್ಲಿ ಕುಳಿತು ಸೂಸೈಡ್ ಮಾಡಿಕೊಳ್ಳುವುದಾಗಿ ಪೊಲೀಸರಿಗೆ ಬೆದರಿಕೆ ಹಾಕಿದ ಸೋನಿಯಾ, ನನ್ನ ಬಗ್ಗೆ ಮೀಡಿಯಾದಲ್ಲಿ ಬಂದರೆ ಮರ್ಯಾದೆ ಹೋಗುತ್ತೆ ಬಿಟ್ಟುಬಿಡಿ ಎಂದು ಕೂಗಾಟ ನಡೆಸಿದ್ದಾಳೆ. ಆ ನಂತರ ಆಕೆಯ ಸ್ನೇಹಿತನ ಮೂಲಕ ಮನವೊಲಿಸಿ ಹೊರಗೆ ಕರೆಸಿದ ಪೊಲೀಸರು ನಂತರ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಸ್ತುತ ಸೋನಿಯಾ ಹಾಗೂ ಆಕೆಯ ಜೊತೆಗಿದ್ದ ಸ್ನೇಹಿತನನ್ನು ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಡಿಸಿಪಿ ಶರಣಪ್ಪ ಅವರು ಕೇಳುತ್ತಿರುವ ಪ್ರಶ್ನೆಗೆ ತಡಬಡಾಯಿಸುತ್ತಿರುವ ಸೋನಿಯಾ, ಉತ್ತರ ನೀಡಲು ಹಿಂದೇಟು ಹಾಕುತ್ತಿದ್ದು, ಅವಳ ಮುಂದೆ ಸಾಕ್ಷ್ಯಗಳನ್ನು ಮುಂದೆ ಇಟ್ಟು ಪ್ರಶ್ನೆ ಕೇಳುತ್ತಿರುವ ಕಾರಣ ಅಸ್ಪಷ್ಟ ಉತ್ತರ ನೀಡುತ್ತಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ ಪೊಲೀಸರು.
ಡ್ರಗ್ ಪೆಡ್ಲರ್ ಥಾಮಸ್ ಹೇಗೆ ಪರಿಚಯ..? ಎಷ್ಟು ವರ್ಷಗಳಿಂದ ಥಾಮಸ್ ಜೊತೆ ಸಂಪರ್ಕ ಹೊಂದಿದ್ದೀರಾ..?? ಥಾಮಸ್‌ನ ಪರಿಚಯ ಮಾಡಿಕೊಟ್ಟವರು ಯಾರು ..?? ಯಾವ್ಯಾವ ಪಾರ್ಟಿಯಲ್ಲಿ ಭಾಗಿಯಾಗಿದ್ದೀರಾ… ಪೆಡ್ಲರ್ ಥಾಮಸ್ ಬಳಿ ಡ್ರಗ್ಸ್ ತರಿಸಿಕೊಂಡಿರುವ ಸಾಕ್ಷ್ಯ ಲಭ್ಯವಾಗಿದೆ ಈ ಕುರಿತು ನಿಮ್ಮ ಸ್ಪಷ್ಟನೆ ಏನು ..?? ಹೀಗೆ ಸಾಲು ಸಾಲು ಪ್ರಶ್ನೆಗಳಿಗೆ ಸೋನಿಯಾ ತಡಬಡಾಯಿಸುತ್ತಿದ್ದಾಳೆ.
ಈ ಡ್ರಗ್ಸ್ ವಿಚಾರವಾಗಿ ತನಿಖೆಯ ಮಾಹಿತಿ ಪಡೆಯಲು ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಪ್ರಕರಣದ ಸಂಬಂಧ ಮಾಹಿತಿ ಪಡೆಯುತ್ತಿದ್ದಾರೆ. ಸೋನಿಯಾ ಮನೆಯಲ್ಲಿ ಗಾಂಜಾ ಪತ್ತೆ ಹಿನ್ನೆಲೆ , ಡ್ರಗ್ಸ್ ಪ್ರಕರಣದ ತನಿಖೆ ಆಯಾಮದ ಬಗ್ಗೆ ಡಿಸಿಪಿ ಜೊತೆ ಚರ್ಚೆ ಮಾಡಿದ್ದಾರೆ.
ತನಿಖೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗ: ಡ್ರಗ್ ಪೆಡ್ಲರ್ ಥಾಮಸ್ ಸಂಪರ್ಕದಲ್ಲಿ ಬರೋಬ್ಬರಿ 30 ಜನರು ಇದ್ದರು ಎಂದು ಹೇಳಲಾಗಿದೆ. ಸದ್ಯ ಆ 30 ಜನರು ಯಾರು ಅನ್ನುವುದರ ಕುರಿತಾಗಿ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಪ್ರತಿನಿತ್ಯವೂ 30 ಜನರ ಜೊತೆ ಥಾಮಸ್ ನಿರಂತರ ಸಂಪರ್ಕದಲ್ಲಿದ್ದ ಎಂದು ಹೇಳಲಾಗಿದೆ.
ಸದ್ಯ 30 ಜನರ ಮಾಹಿತಿ ಸಂಗ್ರಹ ಮಾಡಿದ ನಂತರ ಅವರನ್ನೂ ಸಹ ಖುದ್ದು ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ. ಈ 30 ಸಂಪರ್ಕಿತರ ಪಟ್ಟಿಯಲ್ಲಿ ಭರತ್, ಸೋನಿಯಾ ಹಾಗೂ ಚಿನ್ನಪ್ಪ ಜೊತೆ ಅತಿ ಹೆಚ್ಚು ಸಂಪರ್ಕ ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರತಿಷ್ಟಿತ ಖಾಸಗಿ ಹೋಟೆಲ್ ಗಳಲ್ಲಿ ನಡೆಯುತ್ತಿದ್ದ ವೀಕೆಂಡ್ ಪಾರ್ಟಿಗೆ ಡಿಜೆ ವಚನ್ ಚಿನ್ನಪ್ಪ ಮೂಲಕವೇ ಡ್ರಗ್ಸ್ ಸರಬರಾಜು ಮಾಡಲಾಗುತ್ತಿತ್ತು, ಆದ ಕಾರಣ ಈ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಸತತ ಎರಡು ಗಂಟೆಗೂ ಅಧಿಕ ಕಾಲದಿಂದ ಮೂವರನ್ನು ಪ್ರತ್ಯೇಕ ಠಾಣೆಯಲ್ಲಿರಿಸಿ ವಿಚಾರಣೆ ಮಾಡಲಾಗುತ್ತಿದ್ದು, ಗೊವಿಂದಪುರ ಠಾಣೆಯಲ್ಲಿ ಉದ್ಯಮಿ ಭರತ್, ಡಿಜೆಹಳ್ಳಿಯಲ್ಲಿ ಸೋನಿಯ ಅಗರವಾಲ್ ಮತ್ತು ವಚನ್ ಚಿನ್ನಪ್ಪ ಅವರನ್ನು ಕೆಜಿಹಳ್ಳಿ ಠಾಣೆಯಲ್ಲಿ ವಿಚಾರಣೆ ಮಾಡಲಾಗುತ್ತಿದೆ. ವಿಚಾರಣೆ ಬಳಿಕ ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಕರೆದೊಯ್ಯಲಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.