ನ್ಯೂಡೆಲ್ಲಿ: ಕೇಂದ್ರ ಸರ್ಕಾರ ಯಾಕೋ ಜನಸಾಮಾನ್ಯರನ್ನು ಸರ್ವನಾಶ ಮಾಡಲು ಹೊರಟಂತೆ ಕಾಣುತ್ತಿದೆ. ನಿತ್ಯ ಬಳಕೆಯ ವಸ್ತುಗಳ ಬೆಲೆಯನ್ನು ಏರಿಸುತ್ತಲೇ ಇದೆ. ಇದನ್ನು ನೋಡಿದರೆ ಸರ್ಕಾರ ಎತ್ತ ಸಾಗುತ್ತಿದೆ ಎಂಬುವುದೆ ಅರ್ಥವಾಗದಂತಾಗಿದೆ.
ಹೌದು! ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದ್ದು, ಈ ಬೆಲೆ ಏರಿಕೆಯ ಭೂತದ ಬಿಸಿ ಸದ್ಯಕ್ಕೆ ಸಾಮಾನ್ಯ ಜನರ ಬೆನ್ನು ಬಿಡುವಂತೆ ಕಾಣುತ್ತಿಲ್ಲ. ಒಂದಾದ ಮೇಲೆ ಒಂದರಂತೆ ಬೆಲೆ ಏರಿಕೆಯಾಗುತ್ತಿದ್ದು ಎಲ್‍ಪಿಜಿ ಸಿಲಿಂಡರ್ ಬೆಲೆ ಏರಿಕೆಗೂ ಬ್ರೇಕ್ ಬೀಳುತ್ತಿಲ್ಲ. ಇಂದೂ ಕೂಡ ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ 25 ರೂ. ಏರಿಕೆಯಾಗಿದ್ದು ಸಬ್ಸಿಡಿ ರಹಿತ 14.2 ಕೆಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 884 ರೂ.ಗೆ ಏರಿಕೆಯಾಗಿದೆ.
ಇನ್ನು ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಯೂ 75 ರೂ. ಹೆಚ್ಚಳವಾಗಿದ್ದು ದೆಹಲಿಯಲ್ಲಿ ಸಿಲಿಂಡರ್ ಬೆಲೆ 1,693 ರೂ.ಗೆ ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿ ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆ 887.50 ರೂ. ಹಾಗೂ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ 1760.50 ರೂ.ಗೆ ಏರಿಕೆಯಾಗಿದೆ.
ದೇಶದಲ್ಲಿ ಸಿಲಿಂಡರ್ ಬೆಲೆ ಪದೇ ಪದೇ ಏರಿಕೆಯಾಗುತ್ತಿದೆ. ಮಾರ್ಚ್ 1, 2014ಕ್ಕೆ ಹೋಲಿಸಿಕೊಂಡರೇ ಎಲ್‍ಪಿಜಿ ಬೆಲೆ ದುಪ್ಪಟ್ಟಾಗಿದೆ. 2014 ರಲ್ಲಿ ಗೃಹ ಬಳಕೆಯ ಸಿಲಿಂಡರ್ ಬೆಲೆ 410.50. ಇತ್ತು ಇಂದು ಇದು 887.50 ರೂಪಾಯಿಗೆ ಏರಿಕೆಯಾಗಿದೆ.
ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ 25 ರೂ. ಏರಿಕೆ ಮಾಡಲಾಗಿತ್ತು. ಇದಕ್ಕೂ ಮೊದಲು ಫೆಬ್ರವರಿ ಆರಂಭದಲ್ಲಿ 25 ರೂ., ಫೆಬ್ರವರಿ 15 ರಂದು 50 ರೂ., ಫೆಬ್ರವರಿ 25 ರಂದು 25 ರೂ., ಮಾರ್ಚ್ ಆರಂಭದಲ್ಲಿ 25 ರೂಪಾಯಿ ಏರಿಕೆಯಾಗಿತ್ತು.
ಅಗಸ್ಟ್ ನಲ್ಲಿ ಬೆಲೆ ಏರಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 10 ರೂ. ಬೆಲೆ ಇಳಿಕೆ ಮಾಡಲಾಗಿತ್ತು. 2021 ರಲ್ಲಿ ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ಮೇಲೆ 165.50 ರೂ. ಬೆಲೆ ಏರಿಕೆಯಾಗಿದೆ.