ಹಾವೇರಿ: ಸೆಪ್ಟೆಂಬರ್ 5ರ ಭಾನುವಾರ ಜಿಲ್ಲೆಗೆ ಕೇಂದ್ರ ಸರ್ಕಾರದ ಅತಿವೃಷ್ಟಿ ಅಧ್ಯಯನ ತಂಡ ಜಿಲ್ಲೆಗೆ ಭೇಟಿ ನೀಡಲಿದ್ದು, ಶಿಗ್ಗಾಂವ್, ಹಾನಗಲ್, ಹಾವೇರಿ, ಸವಣೂರ, ರಾಣೇಬೆನ್ನೂರ ಹಾಗೂ ಹಿರೇಕೆರೂರು ತಾಲೂಕಿನ ಹಾನಿಪೀಡಿತ ಆಯ್ದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೇಂದ್ರದ ಅತಿವೃಷ್ಟಿ ಅಧ್ಯಯನ ಪ್ರವಾದ ಹಿನ್ನೆಲೆಯಲ್ಲಿ ಶನಿವಾರ ಪೂರ್ವಭಾವಿ ಸಭೆನಡೆಸಿ ಮಾತನಾಡಿದರು.
ಭಾರತ ಸರ್ಕಾರದ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಮಂತ್ರಾಲಯದ ಅಧಿಕಾರಿ ಎಸ್.ವಿ.ಜಯಕುಮಾರ, ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದ ಅಧಿಕಾರಿ ಕೈಲಾಶ್ ಸಂಖ್ಲಾ ಅವರನ್ನು ಒಳಗೊಂಡ ಅಂತರ ಸಚಿವಾಲಯದ ಅಧ್ಯಯನ ತಂಡವು ಜಿಲ್ಲೆಗೆ ಆಗಮಿಸಲಿದೆ ಎಂದು ಹೇಳಿದರು.
ಹುಬ್ಬಳ್ಳಿಗೆ ಬೆಳಗ್ಗೆ 8-40ಕ್ಕೆ ಆಗಮಿಸುವ ತಂಡ ಹಾವೇರಿ ಜಿಲ್ಲೆ ಶಿಗ್ಗಾಂವ್ ತಹಸೀಲ್ದಾರ್ ಕಚೇರಿಗೆ 10 ಗಂಟೆಗೆ ವೇಳೆಗೆ ಆಗಮಿಸಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯ ಕುರಿತು ಮಾಹಿತಿ ಪಡೆಯಲಿದೆ ಎಂದು ತಿಳಿಸಿದರು.
ಶಿಗ್ಗಾಂವ್ ತಾಲೂಕು ಬಂಕಾಪೂರ ತೋಟಗಾರಿಕೆ ಹಾನಿ ಪ್ರದೇಶಕ್ಕೆ ಭೇಟಿ ನೀಡಲಿದೆ. ಹಾನಗಲ್ ತಾಲೂಕು ಕೂಡಲ ಗ್ರಾಮದ ಕಬ್ಬುಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡಲಿದೆ. ಹಾವೇರಿ ತಾಲೂಕು ನಾಗನೂರ ಗ್ರಾಮದ ಕಬ್ಬು ಹಾಗೂ ಅಡಿಕೆ ತೋಟದ ಹಾನಿ ಕ್ಷೇತ್ರಕ್ಕೆ ಭೇಟಿ ನೀಡಲಿದೆ. ವರದಾಹಳ್ಳಿಯ ತರಕಾರಿ ಹಾಗೂ ಸೋಯಾಬಿನ್ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ಸವಣೂರು ತಾಲೂಕಿನ ಕುಣಿಮೆಳ್ಳಿಹಳ್ಳಿ ಕೃಷಿ ಮತ್ತು ತೋಟಗಾರಿಕೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಮನ್ನಂಗಿಯ ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗದ ರಸ್ತೆ ಹಾಗೂ ಸೇತುವೆಹಾನಿ ಮತ್ತು ಕೃಷಿ ಕ್ಷೇತ್ರದ ಹಾನಿ ಪ್ರದೇಶಕ್ಕೆ ಭೇಟಿ ನೀಡಲಿದೆ.
ನಂತರ ರಾಣೇಬೆನ್ನೂರು ತಾಲೂಕಿನ ಅರೆಮಲ್ಲಾಪುರ ಗ್ರಾಮದ ಮೆಕ್ಕೆಜೋಳ ಹಾನಿ ಕ್ಷೇತ್ರಕ್ಕೆ ಭೇಟಿ ನೀಡಿ, ಹಿರೇಕೆರೂರು ತಾಲೂಕು ರಾಮತೀರ್ಥ ಗ್ರಾಮದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ನಿರ್ಮಾಣವಾಗಿರುವ ಸಂಪರ್ಕ ರಸ್ತೆ ಹಾಗೂ ಸೇತುವೆ ಹಾನಿಯ ವೀಕ್ಷಣೆ ನಡೆಸಲಿದೆ.
ನಂತರ ಹಾನಗಲ್ ತಾಲೂಕಿನ ಕೆರವಡಿಯ ಗ್ರಾಮದ ಬಳಿ ಹಾನಿಯಾಗಿರುವ ತಿಳವಳ್ಳಿ-ಆನವಟ್ಟಿಯ ಲೋಕೋಪಯೋಗಿ ಇಲಾಖೆಯ ರಸ್ತೆ ಹಾನಿ ಪ್ರದೇಶ ವೀಕ್ಷಣೆ ಮಾಡಿ ಹಾನಗಲ್‍ನಿಂದ ಉತ್ತರ ಕನ್ನಡ(ಕಾರವಾರ) ಜಿಲ್ಲೆಗೆ ಪ್ರಯಾಣೆ ಬೆಳೆಸುವುದಾಗಿ ಮಾಹಿತಿ ನೀಡಿದರು.
ಮಾಹಿತಿಯೊಂದಿಗೆ ಹಾಜರಾಗಿ: ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಯಾದ ಮೂಲಭೂತ ಸೌಕರ್ಯಗಳು, ಕೃಷಿ, ತೋಟಗಾರಿಕೆ ಬೆಳೆಗಳು, ಮನೆ, ಕಟ್ಟಡಗಳ ಹಾನಿಗಳ ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ನಿಖರ ಮಾಹಿತಿಯೊಂದಿಗೆ ಸಿದ್ಧವಾಗಿರಬೇಕು. ತಾಲೂಕಾ ಅಧಿಕಾರಿಗಳು ಆಯಾ ಹಾನಿ ಪ್ರದೇಶದ ಸ್ಥಳಗಳಲ್ಲಿ ಮಾಹಿತಿಯೊಂದಿಗೆ ಹಾಜರಾಗಬೇಕು ಎಂದು ಸೂಚನೆ ನೀಡಿದರು.
ಪೂರ್ವ ನಿರ್ಧರಿತ ಹಾನಿ ಪ್ರದೇಶ ಹೊರತಾಗಿಯೂ ಇತರ ಹಾನಿ ಪ್ರದೇಶಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮಾಹಿತಿಯೊಂದಿಗೆ ಸಿದ್ಧವಾಗಿರಬೇಕು. ತಂಡದ ಜೊತೆಗೆ ಅನಗತ್ಯವಾಗಿ ಅಧಿಕಾರಿಗಳು ಪ್ರವಾಸಬೇಡ. ಹಾನಿಗೊಳಗಾದ ಪ್ರದೇಶಕ್ಕೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸ್ಥಳಗಳಲ್ಲಿ ಮಾತ್ರ ಉಪಸ್ಥಿತರಿರಲು ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಸವಣೂರ ಉಪವಿಭಾಗಾಧಿಕಾರಿ ಶ್ರೀಮತಿ ಅನ್ನಪೂರ್ಣ ಮುದಕಮ್ಮವರ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಉಪನಿರ್ದೇಶಕ ಪ್ರದೀಪ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸತೀಶ್ ಜಾಗೀರದಾರ್, ಜಿಲ್ಲಾ ಪಂಚಾಯತ್ ಇಂಜನೀಯರಿಂಗ್ ವಿಭಾಗದ ಚನ್ನವೀರಗೌಡ್ರ ಬಸವರಾಜ ರಾಣೇಬೆನ್ನೂರ ತಹಶೀಲ್ದಾರ ಶಂಕರ್, ಹಿರೇಕೆರೂರು ತಹಸೀಲ್ದಾರ್ ಉಮಾ, ಶಿಗ್ಗಾಂವ್ ತಹಸೀಲ್ದಾರ್ ಮಂಜುನಾಥ್ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.