ಹಾವೇರಿ: ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿರುವ ಕೇಂದ್ರ ತಂಡ ಶಿಗ್ಗಾಂವ ತಾಲೂಕು ತಹಸೀಲ್ದಾರ್ ಕಚೇರಿಯಲ್ಲಿ ಜಿಲ್ಲೆಯ ಅಧಿಕಾರಿಗಳಿಂದ ಹಾನಿಯ ಕುರಿತಂತೆ ಮಾಹಿತಿ ಪಡೆದುಕೊಂಡಿತು.
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಕೇಂದ್ರ ತಂಡಕ್ಕೆ ಅತಿವೃಷ್ಟಿಯಿಂದ ಉಂಟಾದ ಪ್ರವಾಹ ಹಾಗೂ ಹಾನಿಯ ಮಾಹಿತಿಯನ್ನು ಪವರ್ ಪಾಯಿಂಟ್ ಪ್ರಜೆಂಟೇಷನ್ ಮೂಲಕ ಮನವರಿಕೆ ಮಾಡಿಕೊಟ್ಟರು.
ಜುಲೈ ತಿಂಗಳಲ್ಲಿ ವಿಶೇಷವಾಗಿ 23 ರಿಂದ 25ರವರೆಗೆ ಸುರಿದ ಭಾರಿ ಮಳೆಯಿಂದಾಗಿ ಮನೆಹಾನಿ, ಬೆಳೆಹಾನಿ ಹಾಗೂ ಮೂಲಸೌಕರ್ಯಗಳ ಹಾನಿಗೆ ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ 38 ಕೋಟಿ ರೂ. ಪರಿಹಾರದ ಬೇಡಿಕೆಯನ್ನು ಸಲ್ಲಿಸಲಾಗಿದೆ.
ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿಗೆ 8.97 ಕೋಟಿ ರೂ. ಪರಿಹಾರ ಅಗತ್ಯವಾಗಿದೆ. ರಸ್ತೆ, ಸೇತುವೆ, ಕಟ್ಟಡ, ಕುಡಿಯುವ ನೀರಿನ ಸಂಪರ್ಕ ಹಾನಿ ಒಳಗೊಂಡಂತೆ ರೂ.28.96 ಕೋಟಿ ಪರಿಹಾರದ ಅಗತ್ಯವಿದೆ ಎಂದು ಮಾಹಿತಿ ನೀಡಿದರು.
ವಾಸ್ತವ ಹಾನಿ: ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ 8329.68 ಹೆಕ್ಟೇರ್ ಪ್ರದೇಶದ ಅಂದಾಜು ರೂ.23.99 ಕೋಟಿ ಮೊತ್ತದ ಕೃಷಿ ಬೆಳೆಹಾನಿ, 1406.55 ಹೆಕ್ಟೇರ್ ಪ್ರದೇಶದ ಅಂದಾಜು ರೂ.5.31 ಕೋಟಿ ಮೊತ್ತದ ತೋಟಗಾರಿಕೆ ಬೆಳೆಹಾನಿಯಾಗಿದೆ.
55 ಹೆಕ್ಟೇರ್ ಪ್ರದೇಶದ ಕೃಷಿ ಭೂಮಿಯಲ್ಲಿ ಹೂಳು ತುಂಬಿದೆ. ಒಟ್ಟಾರೆ 9791.23 ಹೆಕ್ಟೇರ್ ಹಾನಿಯಾಗಿದ್ದು, ರೂ.29.36 ಕೋಟಿ ಬೆಳೆ ನಷ್ಟ ಉಂಟಾಗಿದೆ. ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ರೂ.8.97 ಕೋಟಿ ಪರಿಹಾರ ಅಗತ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಗೆ ಸೇರಿದ 1,349 ಕಿ.ಮೀ. ರಸ್ತೆ (433 ಕಾಮಗಾರಿ), 246 ಕಿ.ಮೀ.ರಾಜ್ಯ ಹೆದ್ದಾರಿ(40 ಕಾಮಗಾರಿ), 1047 ಕಿ.ಮೀ. ಗ್ರಾಮೀಣ ರಸ್ತೆ(325 ಕಾಮಗಾರಿ), 57 ಕಿ.ಮೀ. ನಗರ ರಸ್ತೆ(68 ಕಾಮಗಾರಿ), 129 ಸೇತುವೆಗಳು, 92 ಸಣ್ಣ ನೀರಾವರಿ ಇಲಾಖೆ ಯೋಜನೆಗಳು, 691 ವಿದ್ಯುತ್ ಕಂಬದ ಹಾಗೂ ಟ್ರಾನ್ಸಮೀಟರ್ ಹಾನಿ, 116 ಜಿಲ್ಲಾ ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಕೆರೆಗಳಿಗೆ ಹಾನಿ, 957 ಶಾಲೆ, ಅಂಗನವಾಡಿ ಹಾಗೂ ವಿವಿಧ ಕಟ್ಟಡಗಳಿಗೆ ಹಾನಿಯಾಗಿದೆ.
915 ಕುಡಿಯುವ ನೀರಿನ ಸಂಪರ್ಕ ಹಾನಿದೆ. ಮೂರು ಕುಡಿಯುವ ನೀರು ಸರಬರಾಜು ಯೋಜನೆಗೆ ಹಾನಿಯಾಗಿದೆ. ಒಟ್ಟಾರೆ ಅಂದಾಜು ರೂ.516 ಕೋಟಿ ಮೊತ್ತದ ಮೂಲ ಸೌಕರ್ಯಗಳಿಗೆ ಹಾನಿಯಾಗಿದ್ದು, ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ರೂ.28.96 ಕೋಟಿ ಪರಿಹಾರ ಅಗತ್ಯವಿದೆ. 1008 ಮನೆಗಳ ಹಾನಿಯಾಗಿದ್ದು, ಅಂದಾಜು 18.37 ಕೋಟಿ ರೂ. ಹಾನಿಯಾಗಿದೆ.
ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಈಗಾಗಲೇ ಹಾನಿಯಾದ ಮನೆಗಳಿಗೆ ರೂ.2.54 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ. ರಾಜ್ಯ ಸರ್ಕಾರದ ಮನೆಹಾನಿ ಪರಿಹಾರದ ಎಸ್.ಡಿ.ಆರ್.ಎಫ್. ಮಾರ್ಗಸೂಚಿಗಳನ್ನು ಕೇಂದ್ರ ತಂಡಕ್ಕೆ ವಿವರಿಸಿದರು.
ಪ್ರವಾಹದ ಸಂದರ್ಭದಲ್ಲಿ ಮೂರು ಜಾನುವಾರುಗಳು ಹಾನಿಯಾಗಿದೆ. ಪರಿಹಾರ ವಿತರಿಸಲಾಗಿದೆ. 24 ಕಾಳಜಿ ಕೇಂದ್ರಗಳನ್ನು ತೆರೆದು 7065 ಜನರಿಗೆ ಪರಿಹಾರ ಒದಗಿಸಲಾಗಿದೆ. 710 ಜನರಿಗೆ ತಲಾ 10 ಸಾವಿರದಂತೆ ತಾತ್ಕಾಲಿಕ ಪರಿಹಾರ ಹಣ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿಗಳಾದ ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ, ಶಿವಾನಂದ ಉಳ್ಳಾಗಡ್ಡಿ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸತೀಶ್ ಜಾಗೀರದಾರ್, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಚನ್ನವೀರಗೌಡ್ರ ಬಸವರಾಜ ಇತರರು ಉಪಸ್ಥಿತರಿದ್ದರು.