ವಿಜಯನಗರ : ಎಲ್ಲಿ ಬಿಜೆಪಿಗೆ ಕಡಿಮೆ ಸ್ಥಾನಗಳು ಬಂದಿವೆಯೋ ಅಂತಹ ಕಡೆಗಳಲ್ಲಿ ಆಪ್ರೇಷನ್ ಕಮಲ ನಡೆಸಿ, ಪ್ರಜಾಪ್ರಭುತ್ವ , ಸಂವಿಧಾನಕ್ಕೆ ದ್ರೋಹ ಬಗೆದು ಅಧಿಕಾರಕ್ಕೆ ಬರುವ ಕೆಲಸ ಮಾಡಬಾರದು. ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಸ್ಪದ ಕೊಡಬಾರದು ಎಂದು ಮಾಜಿ ಸಂಸದ, ಕಾಂಗ್ರೆಸ್ಮುಖಂಡ ವಿ.ಎಸ್. ಉಗ್ರಪ್ಪ ಹಕ್ಕೊತ್ತಾಯ ಮಾಡಿದರು.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಿಗೆ ಮೇಯರ್, ಉಪಮೇಯರ್ ಚುನಾವಣೆ ಶೀಘ್ರದಲ್ಲಿ ನಡೆಸಬೇಕು ಎಂದು ಆಗ್ರಹಿಸಿದರು.
‘ಬಳ್ಳಾ ರಿ ಮಹಾನಗರ ಪಾಲಿಕೆಯ ಚುನಾವಣೆಮುಗಿದು ನಾಲ್ಕು ತಿಂಗಳಾಗಿದೆ. ಅಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಬಂದಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಇದುವರೆಗೆ ಅಲ್ಲಿ ಮೇಯರ್, ಉಪಮೇಯರ್ ಚುನಾವಣೆ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಲ ದಿನಗಳ ಹಿಂದೆ ಮೈಸೂರು ಪಾಲಿಕೆಯ ಮೇಯರ್ ಚುನಾವಣೆ ನಡೆಸಿ, ಬಿಜೆಪಿ ಗದ್ದುಗೆ ಹಿಡಿದಿದೆ. ಅದರಂತೆ ಬಳ್ಳಾರಿಯಲ್ಲಿ ಮೇಯರ್, ಉಪಮೇಯರ್ ಚುನಾವಣೆ ನಡೆಸುವಂತೆ ಆಗ್ರಹಿಸಿ ರಾಜ್ಯ ಚುನಾವಣೆ ಆಯೋಗ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿಯಾಗಿ ಚರ್ಚಿಸಿರುವೆ ಎಂದರು.
ಇನ್ನು ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ಇನ್ನು ಬೆಳಗಾವಿ, ಹುಬ್ಬಳ್ಳಿ –ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿದೆ. ಕಲಬುರ್ಗಿಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ ಇದು ಖುಷಿಯ ವಿಚಾರ ಎಂದರು.