ಕೊರೊನಾ ಲಸಿಕೆ 10-14 ವಾರಗಳ ಅಂತರದಲ್ಲಿ ಪಡೆಯುವುದು ಒಳ್ಳೆಯದು ಎಂದ ವರದಿ
ನ್ಯೂಡೆಲ್ಲಿ: ಕ್ಲಿನಿಕಲ್ ಇಮ್ಯುನೊಲೊಜಿಸ್ಟ್ ಮತ್ತು ರುಮಾಟಾಲಜಿಸ್ಟ್ ಡಾ.ಪದ್ಮನಾಭ ಶೆಣೈ ಮತ್ತು ಅವರ ತಂಡದಿಂದ ನಡೆಸಿದ ಅಧ್ಯಯನದಿಂದ ನಾಲ್ಕರಿಂದ ಆರು ವಾರಗಳ ಅಂತರಕ್ಕಿಂತ 10-14 ವಾರಗಳ ಅಂತರದಲ್ಲಿ ಕೊರೊನಾ ಸೋಂಕು ನಿರೋಧಕ ಲಸಿಕೆ ಪಡೆಯುವುದು ಒಳ್ಳೆಯದು ಎಂಬ ಮಹತ್ವದ ಮಾಹಿತಿ ಬಹಿರಂಗವಾಗಿದೆ.
ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‍ಗಳ ನಡುವಿನ ಅಂತರ ಹೆಚ್ಚಳ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಕೇರಳ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಸೂಚನೆ ನೀಡಿತ್ತು.
ಹೈಕೋರ್ಟ್ ಸೂಚನೆ ಹಿನ್ನೆಲೆ ಎರಡು ಡೋಸ್‍ಗಳ ಅಂತರ ಹೆಚ್ಚಿಸುವುದರಿಂದಾಗುವ ಲಾಭಗಳ ಬಗ್ಗೆ ಕೊಚ್ಚಿಯ ಆಸ್ಪತ್ರೆಯಲ್ಲಿ ಅಧ್ಯಯನ ನಡೆಸಲಾಗಿತ್ತು. 4-6 ವಾರಗಳಲ್ಲಿ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದ 102, 10-12 ವಾರಗಳ ಅಂತರದಲ್ಲಿ ವ್ಯಾಕ್ಸಿನ್ ಪಡೆದ 111 ಜನರ ಮೇಲೆ ಈ ಅಧ್ಯಯನ ನಡೆಸಲಾಗಿತ್ತು.
ಅಧ್ಯಯನದಲ್ಲಿ 4-6 ವಾರಗಳ ಅಂತರದಲ್ಲಿ ವ್ಯಾಕ್ಸಿನ್ ಪಡೆದವರಿಗಿಂತ 10-14 ವಾರಗಳ ಅಂತರದಲ್ಲಿ ಲಸಿಕೆ ಪಡೆದವರಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿ ಇರುವುದು ದೃಢವಾಗಿದೆ.
ಈ ಜನರಲ್ಲಿ ಉತ್ತಮ ಪ್ರತಿರಕ್ಷಣಾ ಶಕ್ತಿ ದೊರೆತಿದೆ. ಜನರಲ್ಲಿ ಶೇ.3.5ರಷ್ಟು ಹೆಚ್ಚು ಪ್ರತಿಕಾಯಗಳು ಉತ್ಪತಿಯಾಗಿದೆ ಎಂದು ಅಧ್ಯಯನದಲ್ಲಿ ಸಾಬೀತಾಗಿದೆ. ಈ ವರದಿಯಲ್ಲಿ ರಾಜ್ಯ ಸರ್ಕಾರ ಅಫಿಡವಿಟ್ ರೂಪದಲ್ಲಿ ಹೈಕೋರ್ಟ್ ಗೆ ಸಲ್ಲಿಸಿದೆ.