ಮುಷ್ಕರ ವೇಳೆ ವರ್ಗಾವಣೆ ಮಾಡಿದ್ದ ನೌಕರರನ್ನು ಮಾತೃ ವಿಭಾಗಕ್ಕೆ ಮರು ವರ್ಗಾವಣೆ ಮಾಡಿದ ಸಾರಿಗೆ ನಿಗಮಗಳು
ಕೋರಿಕೆ ಮೇರೆಗೆ ಎಂಬ ಪದ ಬಳಸಿ ಸಣ್ಣತನ ಪ್ರದರ್ಶಿಸಲು ಹೊರಟ ನಿಗಮಗಳು l ಸಚಿವರ ಗಮನಕ್ಕೆ ತಾರದೆ ಕೃತ್ಯ ಎಸಗುತ್ತಿರುವ ಅಧಿಕಾರಿಗಳು ಎಂಬ ಆರೋಪ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ ಏಕಾಏಕಿ ವರ್ಗಾವಣೆ ಮಾಡಿದ್ದ ಸಾರಿಗೆಯ ನಾಲ್ಕೂ ನಿಗಮಗಳ ಪೈಕಿ ಸೆ.14 ಕೆಎಸ್‌ಆರ್‌ಟಿಸಿ ಸೆ.16ರಂದು ಮತ್ತು ಕೆಕೆಆರ್‌ಟಿಸಿ ತಾನು ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದ್ದ ನೌಕರರನ್ನು ಮತ್ತೆ ಅದೇ ಸ್ಥಳಕ್ಕೆ ವರ್ಗಾವಣೆ ಮಾಡುವ ಬದಲು ಕೋರಿಕೆ ಮೇರೆಗೆ ವರ್ಗಾವಣೆ ಮಾಡಿರುವುದಾಗಿ ತಿಳಿಸಿದೆ.
ಆದರೆ, ಈ ವರ್ಗಾವಣೆಯಿಂದ ನೌಕರರು ತಮ್ಮ ಸೀನಿಯಾರಿಟಿ (ಸೇವಾ ಹಿರಿತನ) ಕಳೆದುಕೊಳ್ಳಲಿದ್ದಾರೆ. ಆದರೆ, ಎನ್‌ಡಬ್ಲ್ಯುಕೆಆರ್‌ಟಿಸಿ ತಮ್ಮ ನಿಗಮದ ತಾಂತ್ರಿಕ ಸಿಬ್ಬಂದಿಗಳನ್ನು ಮರು ವರ್ಗಾವಣೆ ಮಾಡಿದ್ದು ಅವರು ಮಾತೃ ಘಟಕ ಬಿಟ್ಟು ಅದೇ ವಿಭಾಗದ ಬೇರೆ ಘಟಕಕ್ಕೆ ನಿಯೋಜನೆ ಮಾಡಿರುವುದಾಗಿ ತಿಳಿಸಿದೆ.
ಸರ್ಕಾರ ಮತ್ತು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಮುಷ್ಕರದ ವೇಳೆ ದೂರದೂರುಗಳಿಗೆ ವರ್ಗಾವಣೆ ಮಾಡಿರುವ ನೌಕರರನ್ನು ಮತ್ತೆ ಅದೇ ಸ್ಥಳಕ್ಕೆ ವರ್ಗಾವಣೆ ಮಾಡುವುದಾಗಿ ನೌಕರರ ಸಂಘಟನೆಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದ ವೇಳೆ ಭರವಸೆ ನೀಡಿದ್ದರು.
ಅದರಂತೆ ದೂರದೂರುಗಳಿಗೆ ವರ್ಗಾವಣೆ ಮಾಡಲಾಗಿದ್ದ ನಿಗಮಗಳ ನೌಕರರನ್ನು ಮರು ವರ್ಗಾವಣೆ ಮಾಡಲಾಗಿದೆ. ಆದರೆ, ಇಲ್ಲಿ ಪ್ರಮುಖವಾಗಿ ಮುಷ್ಕರದ ವೇಳೆ ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಲಾಗಿತ್ತು. ಇದರಿಂದ ನೌಕರರು ದೂರದೂರುಗಳಿಗೆ ಹೋಗಿ ಸೇವೆ ಸಲ್ಲಿಸಲು ಸಾಧ್ಯವಾಗದ ಕಾರಣ ಮತ್ತು ಏಕಾಏಕಿ ವರ್ಗಾವಣೆ ಮಾಡಿದ್ದರಿಂದ ತುಂಬ ಸಮಸ್ಯೆಗೆ ಸಿಲುಕಿದ್ದರು.
ಇದನ್ನೇ ನೆಪವಾಗಿಟ್ಟುಕೊಂಡ ಆಡಳಿತ ವರ್ಗ ಪ್ರಸ್ತುತ ಸರ್ಕಾರ ಮತ್ತು ಸಾರಿಗೆ ಸಚಿವರ ದಿಕ್ಕು ತಪ್ಪಿಸಿ ನೌಕರರನ್ನು ವರ್ಗಾವಣೆ ಮಾಡಿದ್ದೇವೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ. ಆದರೆ, ಇದರ ಒಳಹೊಕ್ಕು ನೋಡಿದರೆ ಇಲ್ಲಿ ಕಣ್ಣೊರೆಸುವ ನಾಟಕವನ್ನು ಅಧಿಕಾರಿಗಳು ಮಾಡುತ್ತಿರುವುದನ್ನು ಮುಂದುವರಿಸಿದ್ದಾರೆ.
ಅಂದರೆ, ಯಾವುದೇ ವರ್ಗಾವಣೆಗೊಂಡಿರುವ ನೌಕರ ಕೋರಿಕೆ ಮೇರೆಗೆ ವರ್ಗಾವಣೆ ಬಯಸಿ ಈವರೆಗೂ ಒಂದೇ ಒಂದು ಅರ್ಜಿಯನ್ನು ಹಾಕಿಲ್ಲ. ಹಾಗಿದ್ದರೂ ಅಧಿಕಾರಿಗಳು ಮಾಡಿರುವ ವರ್ಗಾವಣೆ ಅದೇಶದಲ್ಲಿ ನೌಕರರ ಕೋರಿಕೆ ಮೇರೆಗೆ ಮರು ವರ್ಗಾವಣೆ ಮಾಡಿದ್ದೇವೆ. ಜತೆಗೆ ಈ ಹಿಂದೆ ಇದ್ದ ಘಟಕಗಳನ್ನು ಬಿಟ್ಟು ಅದೇ ವಿಭಾಗದ ಬೇರೆ ಬೇರೆ ಘಟಕಗಳಿಗೆ ಮರು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮುಷ್ಕರದ ವೇಳೆ ವರ್ಗಾವಣೆ ಮಾಡಿದ್ದ ನೌಕರರನ್ನು ವರ್ಗಾವಣೆ ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ಅಧಿಕಾರಿಗಳು ಒಂದೇ ಸಾಲಿನಲ್ಲಿ ತಿಳಿಸಬಹುದಾಗಿತ್ತು. ಆದರೆ ಮುಷ್ಕರದ ವೇಳೆ ಏನು ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದ್ದಾರೋ ಅದೇ ರೀತಿ ವರ್ಗಾವಣೆ ಮಾಡದೆ ತಮ್ಮ ಅತೀ ಬುದ್ಧಿವಂತಿಕೆಯನ್ನು ಇಲ್ಲಿ ತೋರಿಸಲು ಹೊರಟಿದ್ದಾರೆ.
ಇನ್ನು ಮುಷ್ಕರದ ವೇಳೆ ಏನು ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದ್ದಾರೋ ಅದೇ ರೀತಿ ಈಗಲೂ ಅವರನ್ನು ವರ್ಗಾವಣೆ ಮಾಡಬೇಕು. ಜತೆಗೆ ಅವರ ಮಾತೃ ಘಟಕಕ್ಕೇ ಹಿಂದಿರುಗಿಸಬೇಕು ಎಂಬುವುದು ನೌಕರರ ಮನವಿಯಾಗಿದೆ.