ಬೆಂಗಳೂರು: ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ವಿಧಾನಸಭೆಯಲ್ಲಿ ಮತ್ತೆ ಕಿಡಿಕಾರಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದ ವೇಳೆ ಖರೀಸಿದ್ದ 15 ಲಕ್ಷ ಬ್ಯಾಗ್ ದಂಧೆ ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ಮೈಸೂರಿನ ಹಿಂದಿನ ಘಟನೆಯನ್ನು ಪ್ರಸ್ತಾಪಿಸಿದ ಸಾ.ರಾ.ಮಹೇಶ್, ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ನಾಲ್ಕು ರೂ. ಮೌಲ್ಯದ ಬ್ಯಾಗಿಗೆ 69 ರೂ. ಬಿಲ್ ಹಾಕಿದ್ದಾರೆ.
15 ಲಕ್ಷ ಬ್ಯಾಗ್ ಖರೀದಿಸಿದ್ದು, ಕನಿಷ್ಠ ಆರೂವರೆ ಕೋಟಿ ರೂ. ಲೂಟಿ ಹೊಡೆದಿದ್ದಾರೆ. ಈ ಬ್ಯಾಗ್ ದಂಧೆಯನ್ನು ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ನಾವು 1 ರೂ., 2 ರೂ. ತೆಗೆದುಕೊಂಡಿದ್ದರೆ, ಚುನಾವಣೆ ವೇಳೆ ಜನರಿಗಾದರೂ ಕೊಡುತ್ತೇವೆ. ಆದರೆ, ಐಎಎಸ್ ಅಧಿಕಾರಿಗಳು ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅಧಿಕಾರಿಗಳು ಅಲ್ಲೇ ಇರುತ್ತಾರೆ. 35 ವರ್ಷ ಸುಖ ಜೀವನ ನಡೆಸುತ್ತಾರೆ.
ನಿವೃತ್ತಿ ವೇಳೆಗೆ ಕನಿಷ್ಠ 500 ಕೋಟಿ ರೂ. ಸಂಪತ್ತು ಹೊಂದಿರುತ್ತಾರೆ. ನಂತರ ನಮ್ಮ ಮೇಲೆಯೇ ಚುನಾವಣೆಗೆ ನಿಲ್ಲುತ್ತಾರೆ. ಇವರನ್ನು ನಿಯಂತ್ರಿಸುವವರು ಯಾರೂ ಇಲ್ಲವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವಿಚಾರಕ್ಕೆ ದನಿಗೂಡಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕರ ವಿರುದ್ಧ ಅಧಿಕಾರಿಗಳು ಮಾಧ್ಯಮಗಳ ಮುಂದೆ ಆರೋಪ ಆರೋಪ ಮಾಡಲು ಯಾವುದೇ ಅಧಿಕಾರವಿಲ್ಲ.
ಅವರ ದೂರುಗಳು ಏನೇ ಇದ್ದರೂ ಸರ್ಕಾರದ ಮುಖ್ಯಕಾರ್ಯದರ್ಶಿ ಅವರ ಬಳಿ ವರದಿ ನೀಡಬೇಕು. ಆದರೆ, ಅಧಿಕಾರಿಗಳು ಮಾಧ್ಯಮಗಳ ಮುಂದೆ ಏಕೆ ಹೇಳಬೇಕು. ಅವರಿಗೆ ಈ ಅಧಿಕಾರ ನೀಡಿದವರ್ಯಾರು ಎಂದು ಪ್ರಶ್ನಿಸಿದರು.
ಅಧಿಕಾರಿಗಳ ಜಗಳವನ್ನು ನಿಯಂತ್ರಿಸಬೇಕಾದ ಮುಖ್ಯ ಕಾರ್ಯದರ್ಶಿಗಳ ಬಳಿಗೆ ಅಧಿಕಾರಿಗಳು ಬರಬೇಕಾ ಅಥವಾ ಅಧಿಕಾರಿಗಳು ಇರುವಲ್ಲಿಯೇ ಸಿಎಸ್ ಹೋಗುವುದು ಎಷ್ಟು ಸರಿ ಎಂದು ಮರು ಪ್ರಶ್ನೆ ಹಾಕಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಾನು ಕೂಡ ಒಂದು ಬಾರಿ ಸಿಎಸ್ ಜೊತೆ ಮಾತನಾಡಿದ್ದೇನೆ. ಅಧಿಕಾರಿಗಳು ಮಾಧ್ಯಮಗಳ ಮುಂದೆ ಹೋಗುವುದನ್ನು ನಿಯಂತ್ರಿಸಬೇಕು. ಇದಕ್ಕೆ ಯಾವುದೇ ನಿಯಮಗಳಿಲ್ಲ ಎಂದು ಹೇಳಿದರು.
ಸರ್ಕಾರದ ಪರವಾಗಿ ಉತ್ತರ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳ ವಿಷಯಗಳನ್ನು ಮಾಧ್ಯಮಗಳ ಮುಂದೆ ಪ್ರಸ್ತಾಪ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.