ಹಾವೇರಿ: ಸತತ ಪರಿಶ್ರಮ ಹಾಗೂ ಬದ್ಧತೆಯಿಂದ ಯಶಸ್ಸು ಸಾಧ್ಯ ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್ ಹೊರಟ್ಟಿ ಹೇಳಿದರು.
ಶನಿವಾರ ಕಾಗಿನೆಲೆಯ ಕನಕ ಸಭಾಭವನದಲ್ಲಿ ಬೆಳಗಾವಿ ವಿಭಾಗ ಮಟ್ಟದ ಡ್ರಿಮ್ಸ್ ಒಲಂಪಿಕ್ಸ್ ದೈಹಿಕ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಯಶಸ್ಸು ಒಂದೇ ದಿನದಲ್ಲಿ ಸಿಗಲು ಸಾಧ್ಯವಿಲ್ಲ ಯಾವುದೇ ಸಾಧನೆಗೆ ಕಠಿಣ ಪರಿಶ್ರಮ ಬೇಕು ಎಂದು ಹೇಳಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಬ್ಯಾಡಗಿ ಶಾಸಕರಾದ ವೀರುಪಾಕ್ಷಪ್ಪ ರು ಬಳ್ಳಾರಿ ಅವರು ಮಾತನಾಡಿ, ಮಕ್ಕಳ ಆಟೋಟಗಳಲ್ಲಿ ಮಾತ್ರ ಅಲ್ಲದೆ ಮಾನಸಿಕವಾಗಿ ಹಾಗೂ ಶೈಕ್ಷಣಿಕವಾಗಿ ಸದೃಢಗೊಳಿಸಬೇಕು.
ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಕ್ರೀಡಾ ಪಟುಗಳಿಗೆ ಸತತ ತರಬೇತಿ ನೀಡುವ ಮೂಲಕ ಮುಂದಿನ ಒಲಂಪಿಕ್ಸ್ ಕ್ರೀಡೆಗಳಿಗೆ ತಯಾರಿ ಮಾಡುವಂತೆ ಎಲ್ಲಾ ದೈಹಿಕ ಶಿಕ್ಷಕರಿಗೆ ಮನವಿ ಮಾಡಿದರು.
ಡಯಟ್ ಉಪನಿರ್ದೇಶಕ ಜೆಡ್. ಎಂ. ಖಾಜಿ, ಕನಕ ಅಭಿವೃದ್ಧಿ ಪ್ರಾದಿಕಾರ ಆಯುಕ್ತ ಮಲ್ಲೇಶಪ್ಪ ಹೊರಪೇಟೆ ಇತರರು ಉಪಸ್ಥಿತರಿದ್ದರು.