ಬೆಂಗಳೂರು: ಅಕ್ರಮ ಜೂಜಾಟದಲ್ಲಿ ಯುವಕರು ತೊಡಗುತ್ತಿರುವುದು ಹೆಚ್ಚಾಗುತ್ತಿದೆ. ಹೀಗಾಗಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ರಂಗನಾಥ್ ಹೇಳಿದರು.
ಮಂಗಳವಾರದ ವಿಧಾನ ಮಂಡಳ ಅಧಿವೇಶನದಲ್ಲಿ ನಡೆದ ಪ್ರಶ್ನೋತ್ತರ ವೇಳೆ ಮಾತನಾಡಿದ ಅವರು, ಕೊರೊನಾ ಕಾರಣದಿಂದ ಕೆಲಸ ಕಳೆದುಕೊಂಡ ಹಲವಾರು ಯುವಕರು ನಗರ ಬಿಟ್ಟು ಹಳ್ಳಿಗಳಿಗೆ ಬಂದಿದ್ದಾರೆ. ಆ ಯುವಕರು ಸೇರಿದಂತೆ ಹಳ್ಳಿಗಳಲ್ಲಿರುವ ಹಲವಾರು ಮಂದಿ ಜೂಜಾಟದಲ್ಲಿ ತೊಡಗಿರುವುದರಿಂದ ಅವರು ಕುಟುಂಬಗಳು ತೊಂದರೆಗೆ ಸಿಲುಕುವಂತಾಗಿದೆ. ಹೀಗಾಗಿ ಜೂಜು ಅಡ್ಡೆಯನ್ನು ಮಟ್ಟಹಾಕುವ ಕೆಲಸವನ್ನು ಪೊಲೀಸರು ಮಾಡಬೇಕು ಎಂದರು.
ಈ ವೇಳೆ ಉತ್ತರಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಜೂಜು ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ನಾವು ಈಗಿನ ಕಾಯ್ದೆಗೆ ತಿದ್ದುಪಡಿ ಮಾಡಿ ಹೊಸ ಕಾಯ್ದೆ ತರುತ್ತಿದ್ದೇವೆ. ಈ ಕಾಯ್ದೆಯಿಂದ ಮುಂದಿನ ದಿನಗಳಲ್ಲಿ ಅಕ್ರಮ ಜೂಜುಕೋರರಿಗೆ ಶಿಕ್ಷೆಯಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯವನ್ನು ಜೂಜು ಮುಕ್ತವಾಗಿಸಲು ಸಹಕಾರವಾಗಲಿದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಶಾಸಕ ತಮ್ಮಣ್ಣ ಅವರು ಅಕ್ರಮ ಜೂಜು ಅಡ್ಡೆ ಸಂಬಂಧ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿದ್ದೇವೆ ಆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದ ಹಲವು ಕುಟುಂಬಗಳು ತೊಂದರೆಗೆ ಸಿಲುಕುತ್ತಿವೆ ಎಂದು ತಿಳಿಸಿದರು.
ಈ ವೇಳೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾಯ್ದೆ ಜಾರಿಗೆ ಎಲ್ಲ ಸದಸ್ಯರು ಸಹಕರಿಸಿದರೆ ಎಲ್ಲವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಮುಂದಾಗಿ ಜೂಜು ಕೋರರನ್ನು ಮಟ್ಟಹಾಕಬಹುದು ಎಂದರು.