ಬೆಳಗಾವಿ: ಮುಷ್ಕರದ ವೇಳೆ ವಜಾಗೊಂಡಿರುವ ಎಲ್ಲ ಸಾರಿಗೆ ನೌಕರರು ಕರ್ತವ್ಯಕ್ಕೆ ಮರಳಬಹುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ವಜಾ, ವರ್ಗಾವಣೆ ಮತ್ತು ಅಮಾನತು ಮಾಡಲಾದ ಎಲ್ಲ ಸಾರಿಗೆ ಸಿಬ್ಬಂದಿಯನ್ನು ಮತ್ತೆ ಅದೇ ಸ್ಥಳಲ್ಲಿ ಕೆಲಸಕ್ಕೆ ಸೇರ್ಪಡೆಮಾಡಿಕೊಳ್ಳಲಾಗುವುದು ಎಂದು ಬೆಳಗಾವಿ ಜಿಲ್ಲೆ ಚಿಕ್ಕೋ ಡಿಯಲ್ಲಿ ಶನಿವಾರ ಹೇಳಿದರು.
ಸೆಪ್ಟೆಂಬರ್ 27 ರಂದು ನಡೆಯುವ ಭಾರತ ಬಂದ್‌ಗೆ ಸಾರಿಗೆ ಸಂಸ್ಥೆಗಳ ಬೆಂಬಲ ಇರುವುದಿಲ್ಲ. ಎಂದಿನಂತೆ ಬಸ್ ಸಂಚಾರ ಇರಲಿದೆ. ರೈತರನ್ನು ದಾರಿ ತಪ್ಪಿಸಲು ಕಾಂಗ್ರೆಸ್ ಮುಂದಾಗಿದೆ. ನಿಜವಾದ ರೈತರು ನಮ್ಮ ಪರವಾಗಿದ್ದಾರೆ. ಬಿಳಿ ಶರ್ಟ್ ತೊಟ್ಟ ರೈತರು ಮಾತ್ರ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇನ್ನು ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಪುರಸಭೆ ಕಟ್ಟಡ ಮತ್ತು ಹೈಟೆಕ್ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು. ಹಾಗೆಯೇ, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಈ ವೇಳೆ ಸಚಿವರಾದ ಉಮೇಶ್ ಕತ್ತಿ, ಮೇಲ್ಮನೆ ಆಡಳಿತ ಪಕ್ಷದ ಮುಖ್ಯ ಸಚೇತಕ ಎಂ.ಕವಟಗಿಮಠ್, ಶಾಸಕರಾದ ದುರ್ಯೋಧನ ಐಹೊಳೆ, ಹನಮಂತ ನಿರಾಣಿ, ಮಾಜಿ ಸಂಸದ ರಮೇಶ ಕತ್ತಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.