ಬೆಂಗಳೂರು: ಸಿದ್ದರಾಮಯ್ಯನವರಿಗೆ ಜೆಡಿಎಸ್ ಮನೆಯೊಳಗೆ ಇಣುಕಿ ನೋಡುವ ಕೆಟ್ಟ ಚಾಳಿ ಯಾಕೆ ಬಂತು ಎಂದು ಬಿಜೆಪಿ ರಾಷ್ಟ್ರೀ ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಬಿಜೆಪಿ ಕೋರ್ ಕಮಿಟಿ ಸಭೆಯ ಬಳಿಕ ಮಾತನಾಡಿದ ಅವರು, ಇನ್ನೊಬ್ಬರ ಮನೆಯ ಅಡುಗೆ ಹಾಗೂ ಇನ್ನೊಬ್ಬರ ಬೆಡ್ ರೂಮಿನಲ್ಲಿ ಇಣುಕಿ ನೋಡುವುದು ಸರಿಯಲ್ಲ. ನಾವು ನಮ್ಮ ಮಸಾಲೆ ಸಿದ್ದ ಪಡಿಸಿ ಅಡುಗೆ ಮಾಡುತ್ತೇವೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರನ್ನು ತೀಕ್ಷ್ಣವಾಗಿ ಟೀಕಿಸಿದರು.
ಜೆಡಿಎಸ್ ಅಲ್ಪ ಸಂಖ್ಯಾತರಿಗೆ ಟಿಕೆಟ್ ಕೊಡುವುದು ಅವರ ಪಕ್ಷದ ನಿರ್ಧಾರ. ಜೆಡಿಎಸ್ ನವರು ಯಾರಿಗೆ ಟಿಕೆಟ್ ಕೊಡಬೇಕೆಂದು ನಾವು ಹೇಳಲಾಗುವುದಿಲ್ಲ. ಜೆಡಿಎಸ್- ಕಾಂಗ್ರೆಸ್ ನವರು ಒಟ್ಟಿಗೆ
ಚುನಾವಣೆ ಮಾಡಿದರೂ ಅವರು ಗೆಲ್ಲುವುದಿಲ್ಲ. ನಾವು ಪಾಸಿಟಿವ್ ಚುನಾವಣೆ ಮಾಡುತ್ತೇವೆ ಎಂದರು.
ನಾವು ನಮ್ಮ ಪಕ್ಷದ ಸಾಧನೆ ಆಧಾರದಲ್ಲಿ ಚುನಾವಣೆ ಮಾಡುತ್ತೇ ವೆ. ಬಿಜೆಪಿ ಯಾವುದೇ ಪಕ್ಷವನ್ನು ನಂಬಿ ಚುನಾವಣೆ ಎದುರಿಸುವುದಿಲ್ಲ. ನಾವು ನಮ್ಮದೇ ಆದ ರೀತಿಯಲ್ಲಿ ಚುನಾವಣೆ ನಡೆಸುತ್ತೇವೆ ಎಂದು ಹೇಳಿದರು.
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ರಾಜ್ಯಾಧ್ಯಕ್ಷರು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿ ಕೊಡುತ್ತಾರೆ. ಪಕ್ಷದ ಆಂತರಿಕ ಸಮೀಕ್ಷೆ ಹಾಗೂ ಕೋರ್ ಕಮಿಟಿ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಕೇಂದ್ರ ಚುನಾವಣಾ ಸಮಿತಿಗೆ ಸಲ್ಲಿಸುತ್ತಾರೆ. ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತದೆ ಎಂದು ಹೇಳಿದರು.