ಗಂಗಾವತಿ: ಸಾರಿಗೆ ಸಿಬ್ಬಂದಿಗೆ ದಸರಾ ಹಬ್ಬದೊಳಗೆ ಬಾಕಿ ಇರುವ ಒಂದೂವರೆ ತಿಂಗಳ ವೇತನವನ್ನು ನೀಡಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ತಾಲೂಕಿನ ಆನೆಗೊಂದಿಯ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಚಿವರು, ಸಾರಿಗೆ ನೌಕರರ ವೇತನವನ್ನು ದಸರಾ ಹಬ್ಬದೊಳಗೆ ಬಿಡುಗಡೆ ಮಾಡಲಾಗುವುದು. ವೇತನ ಸಂಬಂಧ ಸಾರಿಗೆ ನೌಕರರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದರು.
ಈಗಾಗಲೇ ಸಿಬ್ಬಂದಿಗಳ ಸಂಕಷ್ಟ ಗೊತ್ತಾಗಿದೆ. ಕೊರೊನಾ ಸಂದರ್ಭದಲ್ಲಿ ತೊಂದರೆಗೆ ಈಡಾಗಿದ್ದಾರೆ. ಈಗಾಗಲೇ ಕೆಲ ತಿಂಗಳ ವೇತನವನ್ನು ಸರ್ಕಾರದಿಂದಲೇ ನೀಡಲಾಗಿದ್ದು, ಇನ್ನು ದಸರಾ ಹಬ್ಬದೊಳಗೆ ಉಳಿದ ವೇತನ ನೀಡಲಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ನಿಗಮ ಸೇರಿ ನಾಲ್ಕೂ ನಿಗಮಗಳ ನೌರರ ವೇತನ ವಿಳಂಬ ಆಗಿರುವುದಕ್ಕೆ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಬುಧವಾರ ಸರಣಿ ಟ್ವೀಟ್‌ಗಳ ಮೂಲ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಕೊರೊನಾ ಮಹಾಮಾರಿಯಿಂದ ತತ್ತರಿಸಿರುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರ ಮೇಲೆ ಸರ್ಕಾರಕ್ಕೆ ಅನಾದರ ಏಕೆ? ಈ ನೌಕರರಿಗೆ ಆಗಸ್ಟ್ ತಿಂಗಳಲ್ಲಿ ಅರ್ಧ ಸಂಬಳವೇ ಆಗಿದ್ದು, ಸೆಪ್ಟೆಂಬರ್ ತಿಂಗಳ ಪೂರ್ಣ ಸಂಬಳ ಆಗಿಲ್ಲ ಎಂಬ ಮಾಹಿತಿ ನನಗೆ ಬಂದಿದೆ.
ವೇತನ ವಿಳಂಬ ಮಾಡುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ತಕ್ಷಣವೇ ವೇತನ ಬಿಡುಗಡೆ ಮಾಡಬೇಕು ಪ್ರತಿ ತಿಂಗಳು ಸಕಾಲ ವೇತನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನು ಟ್ಯಾಗ್ ಮಾಡಿ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದರು.
ಮಕ್ಕಳು ತಪ್ಪು ಮಾಡುವುದು ಸಹಜ. ತಂದೆ-ತಾಯಿ ಸ್ಥಾನದಲ್ಲಿ ಇರುವ ಸರ್ಕಾರ ಕ್ಷಮಿಸಿ ಔದಾರ್ಯ ತೋರುವ ಮನಸ್ಸು ಮಾಡಬೇಕು. ಸಾರಿಗೆ ನೌಕರರ ಮೇಲೆ ಹಗೆತನ ಸಾಧಿಸುವುದು ಬೇಡ. ಜೀವದ ಹಂಗು ತೊರೆದು ಮಹಾಮಾರಿ ಕೊರೋನಾವನ್ನೂ ಲೆಕ್ಕಿಸದೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೂಡಲೇ ಅವರಿಗೆ ವೇತನ ನೀಡಬೇಕು ಎಂದು ಟ್ವೀಟ್‌ಗಳ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದರು.
ಈ ಎಲ್ಲ ಹಿನ್ನೆಲೆಯಲ್ಲಿ ಸಚಿವ ಶ್ರೀರಾಮುಲು, ದಸರಾ ಹಬ್ಬದೊಳಗೆ ಸಾರಿಗೆ ನೌಕರರ ವೇತನವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ದುರ್ಗಾಬೆಟ್ಟದಲ್ಲಿರುವ ಪ್ರದೇಶದಲ್ಲಿ ಸರ್ಕಾರದಿಂದ ಗೋ ಶಾಲೆ ನಿರ್ಮಾಣ: ಗಂಗಾವತಿ ತಾಲೂಕಿನ ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ದುರ್ಗಾಬೆಟ್ಟದಲ್ಲಿರುವ ಪ್ರದೇಶದಲ್ಲಿ ಸರ್ಕಾರದಿಂದ ಗೋ ಶಾಲೆ ನಿರ್ಮಿಸಲಾಗುವುದು.
ಪ್ರಸ್ತುತವಾಗಿ ದುರ್ಗಾ ಬೆಟ್ಟದ ಪ್ರದೇಶದಲ್ಲಿರುವ ಗೋಶಾಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಗೋವುಗಳಿದ್ದು, ಇನ್ನೂ ಹೆಚ್ಚಿನ ಗೋವುಗಳು ಬರುತ್ತವೆ. ಈ ಕಾರಣಕ್ಕೆ ಸರ್ಕಾರ ಜಿಲ್ಲೆಗೊಂದು ಗೋಶಾಲೆ ನಿರ್ಮಾಣದ ಹಿನ್ನೆಲೆಯಲ್ಲಿ ಸರ್ಕಾರದಿಂದ ಇಲ್ಲಿಯೇ ಗೋಶಾಲೆ ನಿರ್ಮಿಸಲಾಗುತ್ತದೆ ಎಂದರು.
ಗೋವುಗಳಿಗೆ ಮೇವು ಸೇರಿದಂತೆ ಕುಡಿಯುವ ನೀರಿನ ಸೌಲಭ್ಯ ಬೇಕಾಗುತ್ತದೆ. ಈ ಕಾರಣಕ್ಕೆ ಸರ್ಕಾರದ ನೀತಿ, ನಿಯಮಗಳನ್ನು ನೋಡಿಕೊಂಡು ಜಮೀನು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುತ್ತದೆ. ಈ ಪ್ರದೇಶದಲ್ಲಿ ಪದೇಪದೇ ಅತಿವೃಷ್ಟಿ, ಅನಾವೃಷ್ಟಿಗಳು ಆಗುತ್ತಿರುವುದರಿಂದ ದನ- ಕರುಗಳಿಗೆ ಮೇವಿನ ಕೊರತೆಯಾಗದಂತೆ ಸರ್ಕಾರ ಕೂಡಲೆ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.
ದುರ್ಗಾಬೆಟ್ಟದಲ್ಲಿರುವ ದುರ್ಗಾದೇವಿ ದೇವಸ್ಥಾನ ಮತ್ತು ಪಂಪಾಸರೋವರ ದೇವಸ್ಥಾನಗಳು ಪ್ರಸಿದ್ಧಿ ಪಡೆದಿವೆ ತಮ್ಮ ಸ್ವಂತ ಖರ್ಚಿನಿಂದ ದೇವಸ್ಥಾನಗಳನ್ನು ನವೀಕರಣಗೊಳಿಸಿ ಭಕ್ತರಿಗೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಸಚಿವ ಶ್ರೀರಾಮುಲು ಅವರು ಪಂಪಾಸರೋವರದಲ್ಲಿ ವಿಜಯಲಕ್ಷ್ಮೇ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ಸುಸಂಸ್ಕೃತರು: ದೇಶದಲ್ಲಿರುವುದು ಚುನಾಯಿತ ಸರ್ಕಾರ ಅಲ್ಲ ಆರ್‌ಎಸ್‌ಎಸ್‌ನಿಂದ ನಿಯಂತ್ರಿಸುವ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದರು.
ಮಾಜಿ ಪ್ರಧಾನಿಯ ಪುತ್ರರಾಗಿರುವ ಕುಮಾರಸ್ವಾಮಿ ಅವರು ಸುಸಂಸ್ಕೃತರಾಗಿದ್ದಾರೆ. ಅವರ ಬಾಯಿಯಿಂದ ಇಂತಹ ಶಬ್ದಗಳು ಬರಬಾರದಿತ್ತು. ಯಾರದ್ದೋ ಮಾತು ಕೇಳಿ ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.
ಆರ್‌ಎಸ್‌ಎಸ್ ಶಿಸ್ತಿನ ಸಂಸ್ಥೆಯಾಗಿದೆ. ಇದರ ನೀತಿ, ನಿಯಮಗಳೇ ಬೇರೆ ಇರುತ್ತವೆ. ಇಂತಹ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದವರ ಬಾಯಲ್ಲಿ ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.