ವಿಜಯಪುರ: ಸಾರಿಗೆ ಸಂಸ್ಥೆಯಲ್ಲಿ ಸಂಧಾನ ಎಂಬ ಅಸ್ತ್ರದ ಮೂಲಕ ಬೃಹದಾಕಾರವಾಗಿ ಭ್ರಷ್ಟಾಚಾರ ಬೆಳೆದುನಿಂತಿದೆ ಎಂಬ ಆರೋಪ ಕೇಳಿ ಬಂದಿದೆ.
ಅದರಲ್ಲೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಲ್ಲಿ ಮಿತಿಮೀರಿದ ಭ್ರಷ್ಟಾಚಾರದಿಂದ ಸಂಸ್ಥೆಗೆ ಸುಮಾರು 2 ಕೋಟಿ ರೂ. ನಷ್ಟ ಉಂಟುಮಾಡಿರುವ ಬಗ್ಗೆ ದೂರು ಕೂಡ ಸಲ್ಲಿಸಲಾಗಿದೆ.
ಹೌದು! ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿರುವ ನಂದಿನಿ ಕ್ಯಾಂಟೀನ್ಗೆ ಮೂರು ವರ್ಷದ ಹಿಂದೆಯೇ ಪ್ರತಿ ತಿಂಗಳ ಬಾಡಿಗೆ 9.5 ಲಕ್ಷ ರೂ. ಇತ್ತು. ಸದರಿ ಬಾಡಿಗೆ ಸಂಧಾನ ಎಂಬ ಭ್ರಷ್ಟಾಚಾರದ ಅಸ್ತ್ರ ಬಳಸಿ ತಿಂಗಳಿಗೆ 5.5 ಲಕ್ಷ ರೂ. ಕಡಿಮೆ ಮಾಡಿ ಲೈಸೆನ್ಸ್ದಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಭ್ರಷ್ಟ ಅಧಿಕಾರಿಗಳು ಎಂಬ ಆರೋಪ ಕೇಳಿ ಬಂದಿದೆ.
ಇದರಿಂದ ಸಂಸ್ಥೆಗೆ ಪ್ರತಿ ತಿಂಗಳು ಬರುತ್ತಿದ್ದ ಆದಾಯ 5.5 ಲಕ್ಷ ರೂ.ಗಳಂತೆ 3 ವರ್ಷಗಳಿಗೆ 1.98 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ. ಇದಕ್ಕೆಲ್ಲ ಅಂದಿನ ಅಧಿಕಾರಿಗಳೇ ನೇರವಾಗಿ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಈ ವಿಷಯವಾಗಿ ವಿಭಾಗೀಯ ಸಂಚಾರ ಅಧಿಕಾರಿ ದೇವಾನಂದ ಬಿರಾದಾರ ಮತ್ತು ವಿಷಯ ನಿರ್ವಾಹಕ ಶ್ರೀಕಾಂತ ಕೊಪ್ಪಳ ಅವರ ವಿರುದ್ಧ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ಸಲ್ಲಿಸಿದ್ದು, ಸದರಿ ನಾನು ಸಲ್ಲಿಸಿದ ದೂರಿಗೆ ಇಲಾಖಾ ವಿಚಾರಣೆ ನಿಯೋಜನೆ ಮಾಡಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಅಲ್ಪ ಸಂಖ್ಯಾತರ ಮೋರ್ಚಾದ ವಿಜಯಪುರ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಸಂತೋಷ ಕುಮಾರ ಗುಗೇರಿ, ಸುಧಣ್ವ ಕುಕನೂರ್ ಮತ್ತು ಶರಣಪ್ಪ ವಾಲಿಕಾರ ಅವರನ್ನು ವಿಚಾರಣಾಧಿಕಾರಿಗಳಾಗಿ ನಿಯೋಜನೆ ಮಾಡಿದ್ದಾರೆ.
ಸಾರಿಗೆ ನೌಕರರು ತಪ್ಪು ಅಥವಾ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳೆ ಬಂದ ಕೂಡಲೇ ಸಂಸ್ಥೆಯ ನಡತೆ ಹಾಗೂ ಶಿಸ್ತು ನಿಯಮಾವಳಿ 1971ರ ನಿಯಮ 21(1)ರ ಪ್ರಕಾರ ದಂಡನಾರ್ಹವಾದ ಅಪರಾಧಗಳನ್ನು ಎಸಗಿದ್ದಾರೆ ಎಂದು ಹಾಗೂ ವಿಚಾರಣೆಗೆ ಬಾಧಕವಾಗಬಾರದು ಎಂದು ವಿಚಾರಣಾಪೂರ್ವ ಅಮಾನತು ಮಾಡುತ್ತಾರೆ.
ಆದರೆ ಸಂಸ್ಥೆಯಲ್ಲಿ ಈ ಅಧಿಕಾರಿಗಳು 2 ಕೋಟಿ ರೂ.ಗಳಷ್ಟು ನಷ್ಟ ಮಾಡುವ ಮೂಲಕ ಇಷ್ಟು ದೊಡ್ಡಮಟ್ಟದಲ್ಲಿ ಸಂಸ್ಥೆಗೆ ಬರುವ ಆದಾಯ ಕುಂಠಿತವಾಗಲು ನೇರವಾಗಿ ಕಾರಣರಾಗಿರುತ್ತಾರೆ ಅಂತ ಆರೋಪ ಮಾಡಿದರು ಅವರ ವಿರುದ್ಧ ಈವರೆಗೆ ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲ. ಇದೂ ಕೂಡ ಹಲವು ಸಂಶಯಕ್ಕೆ ಎಡೆ ಮಾಡಿ ಕೊಟ್ಟಿದೆ.
ಸಂಸ್ಥೆಯ ಕಾನೂನು ಎಲ್ಲರಿಗೂ ಒಂದೇ, ಕಾರ್ಮಿಕರೆ ಆಗಿರಲಿ ಅಥವಾ ಅಧಿಕಾರಿಗಳೆ ಆಗಿರಲಿ ಅದನ್ನು ಪಾಲಿಸಬೇಕು. ಆದರೆ ಇಲ್ಲಿ ಅಧಿಕಾರಿಗಳಿಗೆ ಒಂದು ನ್ಯಾಯ ನೌಕರರಿಗೆ ಒಂದು ನ್ಯಾಯ ಎಂಬಂತೆ ನಡೆದುಕೊಳ್ಳುತ್ತಿರುವುದು ನೋವಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯಪುರ ವಿಭಾಗದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸೂಕ್ತ ತನಿಖೆ ಆಗಬೇಕು, ಅಲ್ಲಿಯ ವರೆಗೆ ಭ್ರಷ್ಟಾಚಾರದ ಆರೋಪಿಗಳಿಗೆ ಸಂಸ್ಥೆಯ ಸುತ್ತೋಲೆ ಪ್ರಕಾರ ವಿಚಾರಣಾ ಪೂರ್ವ ಆಮಾನತು ಮಾಡಬೇಕು ಅಥವಾ ವಿಭಾಗದಿಂದ ಬದಲಾವಣೆ ಮಾಡಬೇಕು ಎಂದು ಕೆಎಸ್ಅರ್ಟಿಸಿ ಎಂಡಿ ಹಾಗೂ ಕೆಕೆಆರ್ಟಿಸಿ ಎಂಡಿ ಅವರಿಗೆ ಆಗ್ರಹಿಸಿದ್ದಾರೆ.