ಬೆಂಗಳೂರು: ಕಳೆದ ಏಪ್ರಿಲ್‌ನಲ್ಲಿ ನಡೆದಂತಹ ಸಾರಿಗೆ ಮುಷ್ಕರದ ವೇಳೆ ಬಹಳಷ್ಟು ಸಾರಿಗೆ ನೌಕರರ ವಿರುದ್ಧ ವಜಾ, ವರ್ಗಾವಣೆ, ಅಮಾನತು ಹಾಗೂ ಪೊಲೀಸ್ ಪ್ರಕರಣಗಳನ್ನು ಕಾನೂನು ಬಾಹಿರವಾಗಿ ದಾಖಲಿಸಲಾಗಿದ್ದು, ಈ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯುಂತೆ ಆಗ್ರಹಿಸಿ ಇಂದು ಸಾರಿಗೆ ನೌಕರರ ಪರವಾದ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟ ( ಬಿಎಂಎಸ್) ಶಾಂತಿಯುತ ಪ್ರತಿಭಟನಾ ಧರಣಿ ನಡೆಸಿತು.
ಗುರುವಾರ ಬೆಳಗ್ಗೆ ಮೌರ್ಯ ವೃತ್ತದಲ್ಲಿ ಬಿಎಂಎಸ್ ಕರೆ ನೀಡಿದ್ದ ಶಾಂತಿಯುತ ಧರಣಿಗೆ ಒಟ್ಟಾರೆ ಸಾರಿಗೆಯ ಬಹುತೇಕ ಸಂಘಟನೆಗಳು ಪರೋಕ್ಷವಾಗಿ ಬೆಂಬಲ ನೀಡಿದ್ದು, ನೂರಾರು ನೌಕರರು ಸಮಾವೇಶಗೊಂಡಿದ್ದರಿಂದ ಧರಣಿ ಯಶಸ್ವಿಯಾಯಿತು.
ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ಸಕಾಲದಲ್ಲಿ ವೇತನ ಪಾವತಿ, ವೇತನ ಪರಿಷ್ಕರಣೆ ಮುಷ್ಕರದ ಸಮಯದಲ್ಲಿ ಕಾನೂನು ಬಾಹಿರವಾಗಿ ತೆಗೆದುಕೊಂಡಿರುವ ಶಿಸ್ತುಕ್ರಮಗಳನ್ನು ಹಿಂಪಡೆಯಬೇಕು ಎಂದು ಸಂಘದ ಅಧ್ಯಕ್ಷ ಪೂಂಜ ಒತ್ತಾಯಿಸಿದರು.
ಎರಡು ಹಂತದ ಆಡಳಿತ ವ್ಯವಸ್ಥೆ, ಏಕರೂಪ ಶಿಸ್ತು ಕ್ರಮ, ನಿವೃತ್ತಿ, ಸ್ವಯಂ ನಿವೃತ್ತಿ ನೌಕರರ ಬಾಕಿ ಹಣ ಪಾವತಿ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಸಬೇಕು ಎಂದು ಪೂಂಜ
ಆಗ್ರಹಿಸಿದರು.
ಸಾರಿಗೆ ಸಂಸ್ಥೆಯ ಆಡಳಿತ ವರ್ಗ ನೌಕರರ ವಿರುದ್ಧ ವಾಮಮಾರ್ಗವನ್ನು ಅನುಸರಿಸುವ ಬದಲಿಗೆ ಅವರ ಕಾನೂನಾತ್ಮಕ ಬೇಡಿಕೆಗಳನ್ನು ಈಡೇರಿಸಬಹುದಲ್ಲ. ಅದನ್ನು ಮಾಡುವ ಬದಲು ಪ್ರತಿಭಟನೆಯಲ್ಲಿ ಭಾಗವಹಿಸಬೇಡಿ ಎಂದು ನೌಕರರಿಗೆ ಪರೋಕ್ಷವಾಗಿ ಎಚ್ಚರಿಕೆ ಕೊಡುತ್ತಿದೆ. ಈ ಮೂಲಕ ನೌಕರರ ಹೋರಾಟದ ಹಕ್ಕನ್ನು ಕಸಿಯಲು ಯತ್ನಿಸುತ್ತಿದೆ ಎಂದು ಕಿಡಿಕಾರಿದರು.
ಸಮಸ್ಯೆಗಳಿಗೆ ಒಳಗಾಗಿರುವ ನೌಕರರ ಬದುಕನ್ನು ಸರಿಪಡಿಸುವ ಕುರಿತು ಹಲವಾರು ಬಾರಿ ಸಂಬಂಧಿಸಿದ ಸಚಿವರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನಮ್ಮ ಸಂಘಟನೆಯೊಂದಿಗೆ ಇತರ ಸಂಘಟನೆಗಳು ಸೇರಿ ಈ ಪ್ರತಿಭಟನಾ ಧರಣಿ ಮಾಡುತ್ತಿದ್ದೇವೆ. ಈಗಲು ಸರ್ಕಾರ ಮತ್ತು ಆಡಳಿತ ವರ್ಗ ಎಚ್ಚತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಕಿಚ್ಚು ಹೆಚ್ಚಾಗಲಿದೆ ಎಂದು ಎಚ್ಚರಿಸಿದರು.
ನೌಕರರ ವಿರುದ್ಧ ವಜಾ, ವರ್ಗಾವಣೆ, ಅಮಾನತು ಹಾಗೂ ಪೊಲೀಸ್ ಪ್ರಕರಣಗಳನ್ನು ದಾಖಲಿಸಿರುವ ಬಗ್ಗೆ ಎಲ್ಲ ಸಮಸ್ಯೆಗಳನ್ನು ಸರಿಪಡಿಸಿಕೊಡುವಂತೆ ಸಂಘಟನೆಗಳ ನಾಯಕರು ಹಲವಾರು ಬಾರಿ ಮುಖ್ಯ ಮಂತ್ರಿಗಳು, ಮಂತ್ರಿಗಳು, ಸಾರಿಗೆ ಸಚಿವರ ಗಮನಕ್ಕೆ ತರಲಾಗಿದೆ. ಆದಾಗ್ಯೂ ಇದುವರೆಗೂ ಯಾವೊಬ್ಬ ನೌಕರನು ಸಮಸ್ಯೆಯಿಂದ ಹೊರ ಬರಲಾಗಿಲ್ಲ.
ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮಾಡಿಕೊಡುತ್ತೇವೆ ಎನ್ನುವ ಭರವಸೆಗಳಲ್ಲಿಯೇ ಆರೇಳು ತಿಂಗಳು ಕಳೆದು ಹೋಯಿತು. ಇನ್ನೂ ಹೀಗೆ ತಿಂಗಳುಗಟ್ಟಲೇ ಮುಂದುವರಿದರೆ ನಮ್ಮ ನೌಕರರ ಪರಿಸ್ಥಿತಿ ಏನಾಗಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಧರಣಿಯಲ್ಲಿ ನೂರಾರು ನೌಕರರು ಭಾಗವಹಿಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.