ಹಾಸನ: ಕೊಟ್ಟ ಸಾಲ ವಾಪಸ್ ಕೊಡು ಎಂದು ಕೇಳಿದ ವೃದ್ಧನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಯುವಕನನ್ನು ಬಂಧಿಸುವಲ್ಲಿ ಹಾಸನ ಗ್ರಾಮಾಂತರ ಪೊಲೀಸರು ಸಫಲರಾಗಿದ್ದಾರೆ
ಇದೇ ಅಕ್ಟೋಬರ್ 12ರಂದು ಕೊಟ್ಟ ಸಾಲ ವಾಪಸ್ ಕೇಳಿದಕ್ಕೆ ಹಾಸನ ತಾಲೂಕಿನ ಸಮುದ್ರವಳ್ಳಿ ಗ್ರಾಮದ 60 ವರ್ಷದ ದಾಸೇಗೌಡ ಎಂಬುವರನ್ನು ಆರೋಪಿ ಯುವಕ ಕಿರಣ್ ಗೌಡ ಎಂಬಾತ ಕೊಲೆ ಮಾಡಿ ಪರಾರಿಯಾಗಿದ್ದ. ದಾಸೇಗೌಡನ ಜಮೀನಿನ ಬಳಿ ನಡೆದಿದ್ದ ಆ ಕೊಲೆ ಪ್ರಕರಣವನ್ನು ಹಾಸನ ಪೊಲೀಸರು ಸದ್ಯ ಭೇದಿಸಿದ್ದು ಆರೋಪಿ ಕೈಗೆ ಕೋಳ ತೊಡಿಸಿದ್ದಾರೆ.
ಈ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದು, ಕೊಲೆ ಆರೋಪಿ ಕಿರಣ್ಗೆ ಕೊಲೆಯಾದ ದಾಸೇಗೌಡ 5 ಲಕ್ಷ ರೂ. ಸಾಲ ನೀಡಿದ್ದರು. ಈ ಸಾಲದ ಹಣವನ್ನು ದಾಸೇಗೌಡ ಹಿಂದಿರುಗಿಸುವಂತೆ ಒತ್ತಡ ಹೇರಿದ್ದಕ್ಕೆ ಕಿರಣ್ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.
ಆರೋಪಿ ಕಿರಣ್ಗೆ ವೃದ್ಧ ದಾಸೇಗೌಡ ಕೆಲ ವರ್ಷದ ಹಿಂದೆ 5 ಲಕ್ಷ ರೂಪಾಯಿ ಸಾಲ ನೀಡಿದ್ದರಂತೆ. ಹೀಗಾಗಿ ತಾನು ನೀಡಿದ್ದ ಹಣವನ್ನು ವಾಪಾಸ್ ಕೊಡು ಅಂತ ದಾಸೇಗೌಡ ಕಿರಣ್ನ್ನು ಪೀಡಿಸಿದ್ದಾನೆ. ಆದರೆ ಕ್ರಿಕೆಟ್ ಬೆಟ್ಟಿಂಗ್, ಜೂಜು ಹೀಗೆ ಹಲವು ದುಶ್ಚಟಗಳನ್ನು ಮೈಗೂಡಿಸಿಕೊಂಡಿದ್ದ ಕಿರಣ್ ದಾಸೆಗೌಡನಿಗೆ ಸಾಲ ಮರುಪಾವತಿ ಮಾಡಲು ಆಗಿರಲಿಲ್ಲ. ಹೀಗಾಗಿ ಕೃತ್ಯ ಎಸಗಿರುವುದಾಗಿ ಬಾಯಿ ಬಿಟ್ಟಿದ್ದಾನೆ.
ಇತ್ತ ದಾಸೇಗೌಡನ ಕಾಟವನ್ನೂ ತಡೆದುಕೊಳ್ಳಲು ಆಗಿಲ್ಲ. ಹೀಗಾಗಿ ದಾಸೆಗೌಡನನ್ನು ಮುಗಿಸಲು ಕಿರಣ್ ತೀರ್ಮಾನಿಸಿದ್ದಾನೆ. ದಾಸೇಗೌಡನ ಚಲವಲನ ಗಮನಿಸಿದ್ದ ಕಿರಣ್, ಅಕ್ಟೋಬರ್ 12ರಂದು ದಾಸೇಗೌಡ ತಮ್ಮ ಜಮೀನು ಬಳಿ ಇದ್ದ ಕೊಟ್ಟಿಗೆ ತೆನೆ ಹಸುವನ್ನು ನೋಡುತ್ತಿದ್ದಾಗ ಹಿಂದಿನಿಂದ ಬಂದ ಚಾಕುವಿನಿಂದ ಇರಿದು ಕೊಂದಿದ್ದಾನೆ ಎನ್ನುವ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಕೊಟ್ಟಿಗೆಯಲ್ಲಿನ ಹಸುಗಳನ್ನು ನೋಡಿಕೊಂಡು ಬರುವುದಾಗಿ ಮನೆಯವರಿಗೆ ತಿಳಿಸಿ ಮನೆಯಿಂದ ಹೋದ ದಾಸೇಗೌಡ ಮನೆಗೆ ಹಿಂದುರುಗಿ ಬಾರದೆ ಹೋದಾಗ, ದಾಸೇಗೌಡನ ಪತ್ನಿ ಜಮೀನು ಬಳಿ ಇದ್ದ ಕೊಟ್ಟಿಗೆ ಹತ್ತಿರ ಹೋಗಿ ನೋಡಿದಾಗ ದಾಸೇಗೌಡ ಕೊಲೆಯಾಗಿರುವುದು ಬಯಲಾಗಿದೆ.