ಬೆಂಗಳೂರು: ಮನೆ ಎದುರಿಗೆ ವಾಹನ ಪಾರ್ಕ್ ಮಾಡುವುದಕ್ಕೂ 5 ಸಾವಿರ ರೂ.ವರೆಗೆ ಶುಲ್ಕ ವಿಧಿಸುವುದು ಸೇರಿದಂತೆ ಹಲವು ಅಮಾನವೀಯ ಮತ್ತು ಅವೈಜ್ಞಾನಿಕ ನಿಯಮಗಳನ್ನು ಒಳಗೊಂಡಿರುವ ನೂತನ ಪಾರ್ಕಿಂಗ್ ನೀತಿ ಖಂಡಿಸಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಿತು.
ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, “ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್) ರೂಪಿಸಿರುವ ನೂತನ ಪಾರ್ಕಿಂಗ್ ನೀತಿ 2.0 ಅವೈಜ್ಞಾನಿಕವಾಗಿದೆ ಎಂದು ಹೇಳಿದರು.
ವಾಹನ ಸವಾರರ ಹಿತ ಕಾಪಾಡುವ ಬದಲು ಕೇವಲ ದುಡ್ಡು ಮಾಡುವ ಯೋಚನೆಯನ್ನು ನೂತನ ನೀತಿ ಹೊಂದಿದೆ. ಈ ನೀತಿ ಜಾರಿಗೆ ಬಂದರೆ, ಉಚಿತ ಪಾರ್ಕಿಂಗ್ ವ್ಯವಸ್ಥೆ ಹೋಗಿ ಎಲ್ಲೆಡೆಯೂ ಪೇಯ್ಡ್ ಪಾರ್ಕಿಂಗ್ ಬರಲಿದೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಹೈರಾಣಾಗಿರುವ ವಾಹನ ಸವಾರರು ಇನ್ನಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಸರ್ಕಾರದ ನಡೆ ವಿರುದ್ಧ ಕಿಡಿಕಾರಿದರು.
ಇದೊಂದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಬೆಂಗಳೂರಿನಾದ್ಯಂತ ಪ್ರತಿಭಟನೆ ಮಾಡುವ ಬಗ್ಗೆ ಯೋಚಿಸುತ್ತೇವೆ. ವಾಹನ ಸವಾರರ ಮೇಲೆ ರಾಜ್ಯ ಸರ್ಕಾರ, ಬಿಬಿಎಂಪಿ ಹಾಗೂ ನಗರ ಭೂ ಸಾರಿಗೆ ನಿರ್ದೇಶನಾಲಯವು ಮಾಡುವ ಶೋಷಣೆಯನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.
ಈಗ 1 ಸಾವಿರ ರೂಪಾಯಿಯಿಂದ 5 ಸಾವಿರ ರೂಪಾಯಿಯವರಿಗೆ ಶುಲ್ಕ ವಿಧಿಸುವುದನ್ನು ಸಹಿಸಿಕೊಂಡರೆ, ನಂತರ ಸರ್ಕಾರ ಇದನ್ನು ದುಪ್ಪಟ್ಟು ಏರಿಕೆ ಮಾಡಿದಾಗಲೂ ಸಹಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ವಾಹನ ಸವಾರರೂ ಎಚ್ಚೆತ್ತುಕೊಂಡು ಸರ್ಕಾರದ ಲೂಟಿಯನ್ನು ವಿರೋಧಿಸಬೇಕು. ವಾಹನ ಸವಾರರ ಅಗತ್ಯ ಮತ್ತು ಅನಿವಾರ್ಯತೆಯನ್ನು ಅರ್ಥ ಮಾಡಿಕೊಂಡು, ನೂತನ ನೀತಿಗೆ ನೀಡಿರುವ ಅನುಮೋದನೆಯನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಸದಂ ಆಗ್ರಹಿಸಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರದ ಉಪಾಧ್ಯಕ್ಷ ಸುರೇಶ್ ರಾಥೋಡ್‌ರವರು ಮಾತನಾಡಿ, ಕಳೆದ ವರ್ಷ ಕೂಡ ರಾಜ್ಯ ಸರ್ಕಾರವು ಜನವಿರೋಧಿ ವಾಹನ ನೀತಿಯನ್ನು ಜಾರಿಗೆ ತರಲು ಮುಂದಾಗಿತ್ತು. ಆದರೆ ಆಮ್ ಆದ್ಮಿ ಪಾರ್ಟಿಯ ವಿರೋಧದಿಂದಾಗಿ ಕೈಬಿಟ್ಟಿತ್ತು. ಈಗ ಮತ್ತೆ ಅದನ್ನು ಸದ್ದಿಲ್ಲದೇ ಜಾರಿಗೆ ತರುತ್ತಿದೆ.
ಇದರ ಹಿಂದೆ ಉತ್ತರ ಭಾರತ ಮೂಲದ ಕಂಪನಿಗಳಿಂದ ಭಾರೀ ಪ್ರಮಾಣದ ಕಿಕ್‌ಬ್ಯಾಕ್ ಪಡೆಯುವ ದುರುದ್ದೇಶವಿದೆ. ವಾಹನಸವಾರರ ಹಣವನ್ನು ಹಗಲು ದರೋಡೆ ಮಾಡಿ, ತಮ್ಮ ಜೇಬು ತುಂಬಿಸಿಕೊಳ್ಳಲು ಆಡಳಿತಾರೋಢ ಬಿಜೆಪಿ ನಾಯಕರು ಯೋಜನೆ ರೂಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಾರ್ಟಿಯ ಮುಖಂಡರಾದ ಮನಸೂರಿನ ಬಸವರಾಜ ಮುದಿಗೌಡರ, ಅಶೋಕ್ ಮೃತ್ಯುಂಜಯ, ಶೆಷಾವಲಿ, ಜಗದೀಶ್‌ಚಂದ್ರ, ರಾಜಶೇಖರ್ ದೊಡ್ಡಣ್ಣ, ಗೋಪಿನಾಥ್, ಪುಷ್ಪಾ ಕೇಶವ್ ಹಾಗೂ ಅನೇಕ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.