ಬೆಂಗಳೂರು: ಶಿಕ್ಷಣ ಹಕ್ಕು (ಆರ್ಟಿಇ) ಕಾಯ್ದೆಗೆ ತಿದ್ದುಪಡಿ ತಂದು, ಅದರ ವ್ಯಾಪ್ತಿಯನ್ನು ಒಂಬತ್ತು ಹಾಗೂ ಹತ್ತನೇ ತರಗತಿಗಳಿಗೂ ವಿಸ್ತರಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಪಕ್ಷದ ಮಾಧ್ಯಮ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿಯ ಮಹಿಳಾ ಮುಖಂಡರಾದ ಉಷಾ ಮೋಹನ್, “ಪ್ರಸ್ತುತ ಎಂಟನೇ ತರಗತಿಯವರೆಗೆ ಮಾತ್ರ ಆರ್ಟಿಇ ಕಾಯ್ದೆ ಅನ್ವಯಿಸುತ್ತಿದೆ. ಆದ್ದರಿಂದ 9 ಹಾಗೂ 10ನೇ ತರಗತಿ ಸೇರುವ ಬಡ ಕುಟುಂಬದ ವಿದ್ಯಾರ್ಥಿಗಳಿಂದ ಖಾಸಗಿ ಶಾಲೆಗಳು ಭಾರೀ ಮೊತ್ತದ ಶುಲ್ಕ ಪಡೆಯುತ್ತಿವೆ.
ಇನ್ನು ಶುಲ್ಕ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣದಿಂದ ವಂಚಿತರಾಗಬೇಕಾದ ಅನಿವಾರ್ಯ ಸ್ಥಿತಿ ಎದುರಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವು ಶೀಘ್ರವೇ ಕಾಯ್ದೆಗೆ ತಿದ್ದುಪಡಿ ತಂದು ಬಡ ವಿದ್ಯಾರ್ಥಿಗಳ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
“ಕೋವಿಡ್ ಹಾಗೂ ಲಾಕ್ಡೌನ್ನಿಂದಾಗಿ ಬಡ ಪೋಷಕರು ಎರಡು ವರ್ಷಗಳ ಕಾಲ ಆದಾಯವಿಲ್ಲದೇ ಆರ್ಥಿಕವಾಗಿ ದುರ್ಬಲವಾಗಿದ್ದಾರೆ. ಆದ್ದರಿಂದ 2020-21ನೇ ಸಾಲಿನಿಂದಲೇ ಅನ್ವಯಿಸುವಂತೆ ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತರಬೇಕು. ಅಂದರೆ, ಆರ್ಟಿಎ ವಿದ್ಯಾರ್ಥಿಗಳ 9 ಹಾಗೂ 10ನೇ ತರಗತಿಗಳ ಕೋವಿಡ್ ಅವಧಿಯ ಎರಡು ವರ್ಷದ ಶಾಲಾ ಶುಲ್ಕವನ್ನು ಸರ್ಕಾರವೇ ಭರಿಸಬೇಕು.
ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಈ ಬಗ್ಗೆ ನಿರ್ಲಕ್ಷ್ಯ ಮುಂದುವರಿಸಿದರೆ ಆಮ್ ಆದ್ಮಿ ಪಾರ್ಟಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿದೆ ಎಂದು ಉಷಾ ಮೋಹನ್ ಎಚ್ಚರಿಕೆ ನೀಡಿದರು.
ಚಿಕ್ಕಪೇಟೆ ವಾರ್ಡ್ ಎಎಪಿ ಅಧ್ಯಕ್ಷ ಗೋಪಿನಾಥ್ ಮಾತನಾಡಿ, “ಖಾಸಗಿ ಶಾಲೆಯ ದುಬಾರಿ ಶುಲ್ಕ ಕಟ್ಟಲು ಸಾಧ್ಯವಾಗದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ಸೇರಲು ಬಯಸುತ್ತಿದ್ದಾರೆ.
ಆದರೆ ಅವರಿಗೆ ವರ್ಗಾವಣೆ ಪತ್ರ (ಟಿಸಿ) ನೀಡಲು ಕೆಲವು ಖಾಸಗಿ ಶಾಲೆಗಳು ಸತಾಯಿಸುತ್ತಿವೆ. ಭಾರೀ ಹಣ ಪಡೆದು ವರ್ಗಾವಣೆ ಪತ್ರ ನೀಡುತ್ತಿರುವ ಘಟನೆಗಳು ಅಲ್ಲಲ್ಲಿ ಕಂಡುಬರುತ್ತಿವೆ. ಬಡವರ ಅಸಹಾಯಕತೆಯ ಲಾಭ ಪಡೆಯುವ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರ್ಕಾರವು ವರ್ಗಾವಣೆ ಪತ್ರ ಇಲ್ಲದೆಯೇ ಸರ್ಕಾರಿ ಶಾಲೆ ಸೇರುವ ವ್ಯವಸ್ಥೆ ಕಲ್ಪಿಸಿದ್ದು, ರಾಜ್ಯದಲ್ಲೂ ಅದೇ ಮಾದರಿಯ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.