ಕೇರಳ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆಯ ವಿವಿಧ ಕಾರ್ಮಿಕ ಸಂಘಟನೆಗಳು ಮಧ್ಯರಾತ್ರಿಯಿಂದ 24 ಗಂಟೆಗಳ ಕಾಲ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸೇವೆಗಳು ಶುಕ್ರವಾರ ರಾಜ್ಯಾದ್ಯಂತ ಸ್ಥಗಿತಗೊಂಡಿದ್ದವು.
ಕೇರಳ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ (KSRTEA) ಮತ್ತು ಕೇರಳ ರಾಜ್ಯ ಸಾರಿಗೆ ನೌಕರರ ಸಂಘ (KSTES)ಗಳ ನೇತೃತ್ವದಲ್ಲಿ ನೌಕರರು ಮುಷ್ಕರಕ್ಕೆ ಮಾಡಿದರು. ಇದರಿಂದಾಗಿ ಬಸ್ ಸೇವೆ ಸ್ಥಗಿತಗೊಂಡಿದ್ದರಿಂದ ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರು ಪರದಾಡುವಂತಾಯಿತು.
ಸಾಮಾನ್ಯ ಜನರು, ವಿಶೇಷವಾಗಿ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವವರು ಬಸ್ ನಿಲ್ದಾಣಗಳಲ್ಲಿ ತಮ್ಮ ತಮ್ಮ ಸ್ಥಳಗಳಿಗೆ ಹೋಗಲು ಹೆಣಗಾಡಿದರು. ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಮತ್ತು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) 48 ಗಂಟೆಗಳ ಸುದೀರ್ಘ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಇಂದು ಬಸ್ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ.
ಈ ವಾರದ ಆರಂಭದಲ್ಲಿ ಸಾರಿಗೆ ಸಚಿವ ಆಂಟನಿ ರಾಜು ಅವರೊಂದಿಗೆ ವೇತನ ಪರಿಷ್ಕರಣೆ ಸಂಬಂಧ ನಡೆಸಿದ ಮಾತುಕತೆ ವಿಫಲವಾದ ನಂತರ ಸರ್ಕಾರಿ ಸ್ವಾಮ್ಯದ ಕಾರ್ಪೊರೇಷನ್‌ನ ನೂರಾರು ನೌಕರರು ಮುಷ್ಕರ ಮಾಡಲು ನಿರ್ಧರಿಸಿದರು. ಕಳೆದ ಒಂಬತ್ತು ವರ್ಷಗಳಿಂದ ಬಾಕಿ ಉಳಿದಿರುವ ವೇತನ ಪರಿಷ್ಕರಣೆ ಕೂಡಲೇ ಜಾರಿಗೆ ತರುವಂತೆ ಸಂಘವು ಒತ್ತಾಯಿಸಿದಾಗ, ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 30 ಕೋಟಿ ರೂ. ಹೊರೆ ಬೀಳಲಿದೆ ಎಂದು ಅವರ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ.
ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಳಿಸುವ ಇಂಥ ಮುಷ್ಕರವನ್ನು ಸಾರ್ವಜನಿಕರು ಒಪ್ಪುವುದಿಲ್ಲ ಎಂದು ರಾಜು ಹೇಳಿದರು. ಸಾಮಾನ್ಯ ಜನರ ಬದುಕನ್ನು ದುಸ್ತರಗೊಳಿಸುವ ಮತ್ತು ಸರ್ಕಾರದ ಮೇಲೆ ಒತ್ತಡ ಹೇರುವ ಇಂತಹ ಮುಷ್ಕರಗಳನ್ನು ಒಪ್ಪಲು ಸಾಧ್ಯವಿಲ್ಲ, ಸರ್ಕಾರ ಕೆಎಸ್‌ಆರ್‌ಟಿಸಿಯನ್ನು ಅಗತ್ಯ ಸೇವೆ ಎಂದು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದರು.