ನ್ಯೂಡೆಲ್ಲಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸೋಮವಾರ (ನ.8) ರಾಷ್ಟ್ರಪತಿ ರಾಮನಾಥ್ ಕೋವಿಂದ್ 2020ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನಮಾಡಿದರು.
ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಈ ಕಾರ್ಯಕ್ರಮದಲ್ಲಿ 7 ಜನರಿಗೆ ಪದ್ಮ ವಿಭೂಷಣ, 10 ಮಂದಿಗೆ ಪದ್ಮಭೂಷಣ ಹಾಗೂ 102 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಜರಿದ್ದರು.
ಕರ್ನಾಟಕದ ನಾಲ್ವರು ಸಾಧಕರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ಅಕ್ಷರ ಸಂತ ಹರೇಕಳ ಹಾಜಬ್ಬು, ಪರಿಸರ ಪ್ರೇಮಿ ತುಳಸಿ ಗೋವಿಂದೇಗೌಡ, ಮಾಜಿ ಹಾಕಿ ಪಟು ಎಂಪಿ ಗಣೇಶ್ ಮತ್ತು ಉದ್ಯಮಿ ವಿಜಯ್ ಸಂಕೇಶ್ವರ್ ಅವರೂ ಕೂಡ ಪದ್ಮ ಶ್ರೀ ಪಶಸ್ತಿ ಪಡೆದರು.
ಅಕ್ಷರ ಸಂತ ಎಂದೇ ಖ್ಯಾತಿ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಹಾಜಬ್ಬ ಬರಿಗಾಲಲ್ಲಿ ಬಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಅನಕ್ಷರಸ್ಥರಾಗಿದ್ದರೂ ಕೂಡ ಬೀದಿ ಬದಿಯಲ್ಲಿ ಕಿತ್ತಲೆ ಹಣ್ಣು ವ್ಯಾಪಾರ ಮಾಡುತ್ತ ಸ್ವಂತ ದುಡಿಮೆಯಲ್ಲಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬ ಅವರಿಂದ ನೂರಾರು ಮಕ್ಕಳು ಶಿಕ್ಷಣ ಪಡೆದಿದ್ದು, ಹಾಜಬ್ಬ ಸಾಧನೆಗೆ 2020ರ ಪ್ರತಿಷ್ಠಿತ ಪದ್ಮ ಪುರಸ್ಕಾರ ಸಿಕ್ಕಿದೆ.
ಇಂದು ನಡೆದ ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಬರಿಗಾಲಲ್ಲಿ ನಡೆದು ಬಂದ ಹಾಜಬ್ಬರನ್ನು ಕಂಡು ಕ್ಷಣ ಕಾಲ ಅಚ್ಚರಿಗೊಳಗಾದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದರು.
ಇದೇ ವೇಳೆ ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ಗುಜರಾತ್ ಮಾಜಿ ಸಿಎಂ ಕೇಶು ಭಾಯ್ ಪಟೇಲ್, ಮಾಜಿ ಕೇಂದ್ರ ಸಚಿವರಾದ ದಿ.ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಈಬಾರಿ 10 ಸಾಧಕರಿಗೆ ಪದ್ಮಭೂಷಣ ಹಾಗೂ ಗಾಯಕ ದಿ.ಎಸ್.ಪಿ.ಬಾಲಸುಬ್ರಹ್ಮಣ್ಯಂ, ಉಡುಪಿ ಖ್ಯಾತ ವೈದ್ಯ ಡಾ.ಬೆಳ್ಳೆ ಮೋನಪ್ಪ ಹೆಗ್ಡೆ ಸೇರಿದಂತೆ 7 ಸಾಧಕರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.