ಧಾರವಾಡ: ಜಿಲ್ಲೆಯ ಕಲಘಟಗಿ ಬಸ್ ನಿಲ್ದಾಣದಲ್ಲೇ ಸಾರಿಗೆ ಸಂಚಾರಿ ನಿಯಂತ್ರಕ (ಟಿಸಿ) ಸುಭಾಸ ಬುಲಬುಲೆ ಎಂಬುವವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ.
ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಕಲಘಟಗಿ ಬಸ್ ನಿಲ್ದಾಣದಲ್ಲೇ ಸೇವೆ ಸಲ್ಲಿಸುತ್ತಿದ್ದ ಸುಭಾಸ ಬುಲಬುಲೆ ಅವರ ಆತ್ಮಹತ್ಯೆಗೆ ಹುಬ್ಬಳ್ಳಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡನ ಕಿರುಕುಳ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟುರುವ ಸುಭಾಸ ಬುಲಬುಲೆ ಅವರು ಡಿಸಿ ರಾಮನಗೌಡನ ಕಿರುಕುಳದಿಂದ ಬೇಸತ್ತು ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಆ ಡೆತ್ ನೋಟ್‌ನಲ್ಲಿ ಬರೆದಿರುವುದಾಗಿ ತಿಳಿದು ಬಂದಿದೆ.
ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಏಪ್ರಿಲ್‌ನಲ್ಲಿ ರಾಜ್ಯದ ನಾಲ್ಕೂ ನಿಗಮಗಳ ನೌಕರರು ಒಟ್ಟಾಗಿ ಮುಷ್ಕರ ನಡೆಸಿದರು. ಆ ಮುಷ್ಕರದ ವೇಳೆ ಅಧಿಕಾರಿಗಳು ಕಾನೂನು ಬಾಹಿರವಾಗಿ ವಜಾ, ಅಮಾನತು, ವಾರ್ಗಾವಣೆ ಜತೆಗೆ ಪೊಲೀಸ್ ಕೇಸ್‌ಗಳನ್ನು ದಾಖಲಿಸಿ ಚಿತ್ರಹಿಂದೆ ನೀಡಿದ್ದರು.
ಬಳಿಕವು ನೌಕರರನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸುತ್ತಿದ್ದು, ಇದರಿಂದ ಮಾನಸಿಕ ಖಿನ್ನತೆಗೆ ಜಾರುತ್ತಿರುವ ಸಾರಿಗೆ ನೌಕರರು ಅನ್ಯ ದಾರಿ ಕಾಣದೆ ಸಾವಿನ ಬಾಗಿಲು ತಟ್ಟುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ನಿಗಮಗಳ ಎಂಡಿಗಳು ಮತ್ತು ಸಾರಿಗೆ ಸಚಿವರು ನೌಕರರ ಸಾವಿಗೆ ಬೇರೆ ಕಾರಣವನ್ನು ನೀಡುವ ಮೂಲಕ ನೌಕರರ ಸಾವಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ನಡೆಸುಕೊಳ್ಳುತ್ತಿದ್ದಾರೆ.
ಹೀಗಾಗಿ ಒಂದು ಕಡೆ ಕಲಸವಿಲ್ಲದೆ ಮತ್ತೊಂದು ಕಡೆ ಕೆಲಸವಿದ್ದರೂ ಅಧಿಕಾರಿಗಳ ಕಿರುಕುಳ ಸಹಿಸಿಕೊಳ್ಳಲಾಗದೆ ನೌಕರರು ಆತ್ಮಹತ್ಯೆಯಂತಹ ದಾರಿ ತುಳಿಯುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬೇಕಾದ ಸಾರಿಗೆ ನೌಕರರ ಪರ ಸಂಘಟನೆಗಳೂ ಕೂಡ ಮೌನವಾಗಿರುವುದು ಅಧಿಕಾರಿಗಳಿಗೆ ಆನೆ ಬಲ ಬಂದಂತಾಗಿದ್ದು, ದರ್ಪ ಮೆರೆಯುತ್ತಿದ್ದಾರೆ.
ಅಧಿಕಾರಿಗಳ ನಡೆಯಿಂದ ಈಗಾಗಲೇ ಅನೇಕ ನೌಕರರು ಮತ್ತು ಅವರ ಕುಟುಂಬಗಳು ಜೀವವನ್ನೇ ಕಳೆದುಕೊಂಡಿವೆ. ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಂಡು ಇರುವ ನೌಕರರನ್ನಾದರೂ ಒಳ್ಳೇ ರೀತಿಯಲ್ಲಿ ನಡೆಸಿಕೊಳ್ಳಬೇಕಿದೆ.