ಬಳ್ಳಾರಿ: ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ತವರು ಜಿಲ್ಲೆ ಬಳ್ಳಾರಿಯಿಂದ ವಿಧಾನಸೌಧದ ವರೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ನವೆಂಬರ್ 29ರಿಂದ ಬಳ್ಳಾರಿಯಿಂದ ವಿಧಾನಸೌಧದ ವರೆಗೆ ಪಾದಯಾತ್ರೆ ನಡೆಯಲಿದ್ದು, ಪ್ರಮುಖವಾಗಿ ವೇತನ ತಾರತಮ್ಯತೆ ನಿವಾರಿಸಬೇಕು ಅದಕ್ಕಾಗಿ ಸರ್ಕಾರವೇ ಭರವಸೆ ಕೊಟ್ಟಂತೆ 6ನೇ ವೇತನ ಆಯೋಗ ಜಾರಿಯಾಗಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಏಪ್ರಿಲ್‌ನಲ್ಲಿ ನಡೆದ ಸಾರಿಗೆ ನೌಕರರ ಮುಷ್ಕರದ ವೇಳೆ ಕಾನೂನು ಬಾಹಿರವಾಗಿ ಅಮಾನತು, ವಜಾ, ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ನೌಕರರು ತಿಳಿಸಿದ್ದಾರೆ.
ಪ್ರಮುಖವಾಗಿ ಮುಷ್ಕರ ಸಮಯದಲ್ಲಿ ನೌಕರರ ವಿರುದ್ಧ ದಾಖಲಾಗಿರುವ ವಿವಿಧ ಪ್ರಕರಣಗಳನ್ನು ಕೂಡಲೇ ವಾಪಸ್ ಪಡೆದು ಮುಷ್ಕರದ ಹಿಂದೆ ಇದ್ದ ಸ್ಥಿತಿಯಲ್ಲಿ ನೌಕರರನ್ನು ನಡೆಸಿಕೊಳ್ಳಬೇಕು. ಜತೆಗೆ 6ನೇ ವೇತನ ಆಯೋಗ ಜಾರಿ ಮಾಡಲೇ ಬೇಕು. ಕಾರಣ ಕಳೆದ 2020 ಜನವರಿಯಲ್ಲಿ ಆಗಬೇಕಿದ್ದ ಅಗ್ರಿಮೆಂಟ್ ಕೂಡ 2ವರ್ಷ ಸಮೀಪಿಸುತ್ತಿದ್ದರು ಸರ್ಕಾರ ಯಾವುದೇ ಚಕಾರವೆತ್ತಿಲ್ಲ. ಹೀಗಾಗಿ ನಮಗೆ 6ನೇ ವೇತನ ಆಯೋಗ ಜಾರಿ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಅಲ್ಲದೆ ನಿಗಮಗಳಲ್ಲಿ ಚಾಲನಾ ಸಿಬ್ಬಂದಿಗೆ ಅಂದರೆ ಡಿ ಗ್ರೂಪ್ ನೌಕರರಿಗೆ ನಿಗಮದ ಕಚೇರಿ ಸಿಬ್ಬಂದಿಗೇ ಕೊಡುವಷ್ಟು ವೇತನ ಸಿಗುತ್ತಿಲ್ಲ. ಜತೆಗೆ ಅಗ್ರಿಮೆಂಟ್ ಆದರೆ ಚಾಲನಾ ಸಿಬ್ಬಂದಿಗೆ ಒಂದು ರೀತಿಯ ಅಗ್ರಮೆಂಟ್ ಮತ್ತು ಕಚೇರಿಯ ಸಿಬ್ಬಂದಿ ವರ್ಗಕ್ಕೆ ಒಂದು ರೀತಿಯ ಅಗ್ರಿಮೆಂಟ್ ಮಾಡಿಕೊಳ್ಳುತ್ತಾರೆ. ಇದರಿಂದ ನಮಗೆ ಈಗಾಗಲೇ ಬರುತ್ತಿರುವ ವೇತನವೇ ಕಡಿಮೆ ಈ ನಡುವೆ ನಿಗಮದೊಳಗೇ ಅತ್ಯಂತ ಕಡಿಮೆ ವೇತನ ನೀಡುವ ಮೂಲಕ ನಮಗೆ ನಿಗಮಗಳಲ್ಲೇ ತಾರತಮ್ಯತೆ ಮಾಡುತ್ತಿದ್ದಾರೆ ಇದು ಮೊದಲು ಹೋಗಲಾಡಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಇನ್ನು ರಾಜ್ಯದಲ್ಲಿ ಇರುವ ನಿಗಮಗಳಲ್ಲಿ ಡಿ, ಸಿ ಗ್ರೂಪ್ ನೌಕರರಿಗೆ 5 ವರ್ಷಕ್ಕೊಮ್ಮೆ ಮುಂಬಡ್ತಿ ಸಿಗುತ್ತಿದ್ದು, ಅವರು ಹಂತಹಂತವಾಗಿ ಹೆಚ್ಚು ವೇತನ ಪಡೆದು ನಿವೃತ್ತಿ ಅಂಚಿನವೇಳೆ ಒಳ್ಳೆ ವೇತನ ಪಡೆಯುತ್ತಾರೆ. ಆದರೆ, ನಮಗೆ ಕಳೆದ 25-30 ವರ್ಷ ಸೇವೆ ಸಲ್ಲಿಸಿದ್ದರೂ ಒಂದೇ ಒಂದು ಬಡ್ತಿಕೂಡ ನೀಡದೆ ಜೀತದಾಳುಗಳಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ. ಇದು ಕೂಡ ಮೊದಲು ತೊಲಗಬೇಕು.
ಇನ್ನು ಮಹಿಳಾ ಚಾಲನಾ ಸಿಬ್ಬಂದಿಗೆ ಶೇ.33ರಷ್ಟು ಮೀಸಲಾತಿಯಡಿ ಮುಂಬಡ್ತಿ ನೀಡಬೇಕಿದೆ. ಆದರೆ, ಕಳೆದ 20-25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಹುತೇಕ ನೌಕರರಿಗೆ ಈವರೆಗೂ ಮುಂಬಡ್ತಿ ನೀಡಿ ಟಿಸಿ, ಎಟಿಐ, ಟಿಐ ಮಾಡಬೇಕಿದ್ದರೂ ಮಾಡಿಲ್ಲ.
ನಮ್ಮ ನೌಕರರಿಗೂ ಮೀಸಲಾತಿಯಡಿ 5 ವರ್ಷಕ್ಕೊಮ್ಮೆ ಮುಂಬಡ್ತಿ ನೀಡಿದ್ದರೆ ಈ ವೇತನ ತಾರತಮ್ಯತೆ ಸ್ವಲ್ಪಮಟ್ಟಿಗಾದರೂ ಕಡಿಮೆಯಾಗುತ್ತಿತ್ತು. ಆದರೆ ನಿಗಮಗಳ ಆಡಳಿತ ವರ್ಗ ಮಹಿಳಾ ಸಿಬ್ಬಂದಿಯನ್ನು ಕಡೆಗಣಿಸಿ 20-25 ವರ್ಷ ಸೇವೆ ಸಲ್ಲಿಸಿದ್ದರೂ ಈ ವರೆಗೂ ಒಂದೇ ಒಂದು ಮುಂಬಡ್ತಿ ನೀಡಿಲ್ಲ. ಈ ಬಗ್ಗೆಯೂ ಸರ್ಕಾರ ಮತ್ತು ಸಂಬಂಧಪಟ್ಟ ಸಚಿವರು ಕೂಡಲೇ ಕ್ರಮತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಿಗಮಗಳಲ್ಲಿ ರೂಟ್ ಹಾಕಿಸಿಕೊಳ್ಳುವುದಕ್ಕೂ ಲಂಚಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಇದರಿಂದ ಸೇವಾ ಹಿರಿತನವಿದ್ದರೂ ಚಾಲನಾ ಸಿಬ್ಬಂದಿಗೆ ಸರಿಯಾದ ರೂಟ್ ಸಿಗುತ್ತಿಲ್ಲ. ಆದರೆ ಲಂಚಕೊಡುವ ಸಿಬ್ಬಂದಿಗೆ ಅವರು ಕೇಳಿದ ರೂಟ್ ಹಾಕಿಕೊಡುತ್ತಿದ್ದಾರೆ. ಇದು ಮೊದಲು ತೊಲಗಬೇಕು. ಸೇವಾ ಹಿರಿತನದ ಆಧಾರದ ಮೇಲೆ ರೂಟ್ ಕೊಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹೀಗೆ ಹತ್ತು ಹಲವು ಸಮಸ್ಯೆ ಬೇಡಿಕೆಗಳನ್ನು ಇಟ್ಟುಕೊಂಡು ನವೆಂಬರ್ 29ರಿಂದ ಬಳ್ಳಾರಿಯಿಂದ ವಿಧಾನಸೌಧದ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು ಎಲ್ಲ ನೌಕರರು ಭಾಗಿಯಾಗಬೇಕು ಎಂದು ಕಾರ್ಮಿಕ ಮುಖಂಡರಾದ ದೊಡ್ಡಪ್ಪ, ಮಹಾಂತೇಶ್ ಭಜಂತ್ರಿ, ನಿಂಗಪ್ಪ ಇನ್ನು ಮುಂತಾದವರು ಮನವಿ ಮಾಡಿದ್ದಾರೆ.