ಹಾನಗಲ್: ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ತವರು ಜಿಲ್ಲೆ ಬಳ್ಳಾರಿಯಿಂದ ವಿಧಾನಸೌಧದ ವರೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಆರಂಭಗೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಪಾದಯಾತ್ರೆ ಹಾನಗಲ್‌ನಲ್ಲಿ ತಂಗಿತ್ತು.
ನಂತರ ಮಂಗಳವಾರ ಮುಂಜಾನೆ 5ಗಂಟೆಗೆ ಹಾನಗಲ್‌ನಿಂದ ಆರಂಭವಾಯಿತು. ಈ ಮಧ್ಯೆ ಹಾನಗಲ್‌ನಲ್ಲಿ ಪಾದಯಾತ್ರೆ ಮಾಡುತ್ತಿರುವ ನೌಕರರು ರಾತ್ರಿ ಉಳಿದುಕೊಳ್ಳಲು ಮಸೀದಿಯಲ್ಲಿ ಮುಸ್ಲಿಂ ಬಾಂಧವರು ವ್ಯವಸ್ಥೆ ಮಾಡಿದ್ದರು. ಜತೆಗೆ ಊಟದ ವ್ಯವಸ್ಥೆಯನ್ನು ಮಾಡಿಕೊಟ್ಟು ಸತ್ಕರಿಸುವ ಮೂಲಕ ಪಾದಯಾತ್ರೆಗೆ ಬೆಂಬಲ ಸೂಚಿಸಿದರು.
ಆದರೆ, ತಮಗಾಗಿ ಪಾದಯಾತ್ರೆ ಮಾಡುತ್ತಿದ್ದರೂ ಅಧಿಕಾರಿಗಳಿಗೆ ಹೆದರಿ ನೌಕರರು ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆ ಮಾಡದಿರುವುದು ತುಂಬಾ ನೋವಿನ ಸಂಗತಿ. ಆದರೂ ಪರವಾಗಿಲ್ಲ ನಿಮಗಾಗಿ ನಾವು ಪಾದಯಾತ್ರೆ ಮಾಡೆ ತೀರುತ್ತೇವೆ ಎಂದು ದೊಡ್ಡಯ್ಯ ಮತ್ತು ನಿಂಗಪ್ಪ ಈ ಇಬ್ಬರು ಬಳ್ಳಾರಿಯಿಂದ ವಿಧಾನಸೌಧದ ವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ.
ಈ ಪಾದಯಾತ್ರೆಗೆ ಮತ್ತೊಬ್ಬ ನೌಕರರು ಸೇರಿಕೊಂಡಿದ್ದು ಇಂದು ಪಾದಯಾತ್ರೆ ಹೊರಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಈ ಮೂರು 3 ಸಾವಿರವಾಗುವ ವಿಶ್ವಾಸವನ್ನು ನೌಕರರು ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದಿಂದ ಆರಂಭವಾದ ಪಾದಯಾತ್ರೆ ಚಳ್ಳಕೆರೆ – ಹಿರಿಯೂರು ಬೈಪಾಸ್ – ತುಮಕೂರು – ಯಶವಂತಪುರ – ಮೇಖ್ರಿ ವೃತ್ತ – ಪ್ಯಾಲೇಸ್ ಗುಟ್ಟಹಳ್ಳಿ ಮಾರ್ಗವಾಗಿ ಸಾಗಿ ಡಿ.4ರಂದು ವಿಧಾನಸೌಧ ತಲುಪಲಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಮತ್ತು ಬೇಡಿಕೆಗಳ ಮನವಿ ಸಲ್ಲಿಸಲಿದ್ದಾರೆ.
ಅನಂತ ಅನಂತ ಧನ್ಯವಾದಗಳು: ನಾಲ್ಕು ನಿಗಮಗಳ 1,30 ಲಕ್ಷ ನೌಕರರ ಪರವಾಗಿ ಬಳ್ಳಾರಿ ಯಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡು ಈಗಾಗಲೇ ಬಳ್ಳಾರಿ ಬಿಟ್ಟು ಒಂದು ರಾತ್ರಿ ಹಾನಗಲ್ ವಾಸ್ತವ್ಯ ಮಾಡಿ ಇಂದು ಬೆಳಗ್ಗೆ ಹಾನಗಲ್ ಬಿಟ್ಟು ಚಳ್ಳಕೆರೆ ಮಾರ್ಗ ಮಧ್ಯದಲ್ಲಿ ಬರುತ್ತಿರುವ ಸಾರಿಗೆ ನೌಕರರಿಗೆ ನನ್ನ ಅನಂತ ಅನಂತ ಧನ್ಯವಾದಗಳು ಅಕ್ಕ ಪಕ್ಕದ ನೌಕರರು ಇವರಿಗೆ ಬೆಂಬಲ ಮತ್ತು ಸಹಕಾರ ನೀಡಬೇಕಾಗಿ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಚಾಲಕ ದ್ಯಾವಪ್ಪ ಟಿ.ಎ. ಮನವಿ ಮಾಡಿದ್ದಾರೆ.