ಬೆಂಗಳೂರು: ಸ್ಯಾಂಡಲ್ವುಡ್ ನಟಿ ಅಮೂಲ್ಯ ಜಗದೀಶ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಹೌದು! ನಟಿ ಅಮೂಲ್ಯ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ವಿಚಾರವನ್ನು ಸ್ವತಃ ‘ಐಶ್’ ಅವರೇ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಪತಿ ಜಗದೀಶ್ ಜೊತೆ ಇರುವ ಒಂದು ವಿಶೇಷ ಫೋಟೋವನ್ನು ಹಂಚಿಕೊಂಡು ‘ಸದ್ಯ ನಾವು ಈಗ ಇಬ್ಬರಲ್ಲ. 2022ರಲ್ಲಿ ಮೂವರಾಗುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. ಅಮೂಲ್ಯ ಈ ರೀತಿ ಬರೆದುಕೊಳ್ಳುತ್ತಿದ್ದಂತೆಯೇ ಅಭಿಮಾನಿಗಳು ವಿಶ್ ಮಾಡಲು ಆರಂಭಿಸಿದ್ದಾರೆ.
ಬಾಲನಟಿಯಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟ ಅಮೂಲ್ಯ ಅವರು ‘ಚೆಲುವಿನ ಚಿತ್ತಾರ’ ಸಿನಿಮಾ ಮೂಲಕ ನಾಯಕಿ (Heroine) ನಟಿಯಾಗಿ ಚಿರಪರಿಚಿತರಾದರು. ಚಿಕ್ಕ ವಯಸ್ಸಿನಲ್ಲಿಯೇ ಸ್ಟಾರ್ ನಟರೊಂದಿಗೆ ಅಭಿನಯಿಸಿದ ಕೀರ್ತಿ ಇವರದು.
ಇತ್ತ ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ 2017ರಲ್ಲಿ ರಾಜಕೀಯ ಹಿನ್ನೆಲೆ ಇರುವ ಕುಟುಂಬದ ಜಗದೀಶ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಕನ್ನಡದ ಹಲವಾರು ಸಿನಿಮಾಗಳಲ್ಲಿ ಅಮೂಲ್ಯ ನಟಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಈ ಮೂಲಕ ಅವರು ಸಂಸಾರದ ಕಡೆಗೆ ಹೆಚ್ಚು ಗಮನ ನೀಡಿದ್ದಾರೆ. ಈಗ ತಾಯಿ ಆಗುತ್ತಿರುವ ಸುದ್ದಿ ಕೇಳಿ ಅಭಿಮಾನಿಳು ಸಂತಸ ವ್ಯಕ್ತಪಡಿಸಿದ್ದಾರೆ.