ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಹಗರಣಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಭ್ರಷ್ಟಾಚಾರ ತಡೆಯುವುದರಲ್ಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ರಾಜ್ಯ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದ ವಿದ್ಯಾರ್ಥಿನಿಲಯಗಳು, ಆಶ್ರಮ ಶಾಲೆಗಳು ಹಾಗೂ ವಸತಿ ಶಾಲೆಗಳಿಗೆ ಆಹಾರ ಸಾಮಗ್ರಿಗಳನ್ನು ಪೂರೈಸುವ ಟೆಂಡರ್‌ಗಳಲ್ಲಿ ಭಾರೀ ಅಕ್ರಮ ನಡೆಯುತ್ತಿದೆ.
ಗುತ್ತಿಗೆದಾರರು ಅತ್ಯಂತ ಕಡಿಮೆ ಬೆಲೆಗೆ ಗುತ್ತಿಗೆ ಪಡೆದು ಆಹಾರವನ್ನು ಸಮರ್ಪಕವಾಗಿ ಪೂರೈಸದೇ ವಂಚಿಸುತ್ತಿದ್ದಾರೆ. ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಚಿವರು ಇದರಲ್ಲಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಸೂಕ್ತ ತನಿಖೆ ನಡೆದರೆ ಮಾತ್ರ ಸತ್ಯಾಂಶ ಹೊರಬರಲಿದೆ ಎಂದು ಆಗ್ರಹಿಸಿದರು.
ತುಮಕೂರು ಜಿಲ್ಲೆಗೆ 101 ಆಹಾರ ಸಾಮಗ್ರಿಗಳನ್ನು ಪೂರೈಸಲು ಒಂದು ಕೆ.ಜಿ ಗೋಡಂಬಿಗೆ 50 ರೂಪಾಯಿ, ಏಲಕ್ಕಿಗೆ 20, ಕಾಳುಮೆಣಸಿಗೆ 30 ರೂಪಾಯಿ ಹಾಗೂ ಇನ್ನೂ ಅನೇಕ ಸಾಮಗ್ರಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ಪೂರೈಸಲು ಗುತ್ತಿಗೆದಾರರು ಗುತ್ತಿಗೆ ಪಡೆದಿದ್ದಾರೆ. ಮಾರುಕಟ್ಟೆ ಬೆಲೆಯು ಅದಕ್ಕಿಂತ ಸುಮಾರು ಹತ್ತು ಪಟ್ಟು ಹೆಚ್ಚಿದ್ದರೂ, ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸದೇ ಗುತ್ತಿಗೆಗೆ ಅನುಮೋದನೆ ನೀಡಿದ್ದಾರೆ.
ಗುತ್ತಿಗೆದಾರರು ಸಾಮಗ್ರಿಗಳನ್ನು ಸರಿಯಾಗಿ ಪೂರೈಸದಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆ. ಇದೊಂದು ದೊಡ್ಡ ಹಗರಣವಾಗಿದ್ದು, ರಾಜ್ಯ ಸರ್ಕಾರವು ಶೀಘ್ರವೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಬೇಕು ಎಂದು ರಾಜಶೇಖರ್ ದೊಡ್ಡಣ್ಣ ಒತ್ತಾಯಿಸಿದರು.
ಚಿಕ್ಕಪೇಟೆ ವಾರ್ಡ್ ಎಎಪಿ ಮುಖಂಡರಾದ ಗೋಪಿನಾಥ್ ಮಾತನಾಡಿ, “ರಾಜ್ಯ ಸರ್ಕಾರದ ಇಲಾಖೆಗಳ ಪೈಕಿ ಅತಿ ಹೆಚ್ಚು ಅನುದಾನ ಪಡೆಯುವ ಇಲಾಖೆ ಎಂದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ. ಐದು ವರ್ಷಗಳ ಅವಧಿಯಲ್ಲಿ 80,000 ಕೋಟಿ ರೂಪಾಯಿಗಿಂತಲೂ ಅಧಿಕ ಮೊತ್ತವು ಈ ಇಲಾಖೆಯ ಪಾಲಾಗುತ್ತಿದೆ.
ಈ ಹಿಂದೆ ಸಚಿವರಾಗಿದ್ದ ಎಚ್.ಆಂಜನೇಯ ಅವರ ಪತ್ನಿಯು ಹಿಂದುಳಿದ ವರ್ಗಗಳ ಇಲಾಖೆಯ ಅಕ್ರಮದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದರೂ ಯಾವುದೇ ಶಿಕ್ಷೆಯಾಗಿಲ್ಲ. ಇಲಾಖೆಯಲ್ಲಿ ಮಿತಿಮೀರಿರುವ ಭ್ರಷ್ಟಾಚಾರದಿಂದಾಗಿ, ಎಷ್ಟೇ ಅನುದಾನ ನೀಡಿದರೂ ಹಿಂದುಳಿದ ವರ್ಗಗಳ ಜನರು ಅಭಿವೃದ್ಧಿ ಹೊಂದುತ್ತಿಲ್ಲ. ಎಲ್ಲವೂ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳ ಪಾಲಾಗುತ್ತಿದೆ ಎಂದು ಆರೋಪಿಸಿದರು.