ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸ್ಯಾಂಡಲ್‍ವುಡ್‍ನ ಶಿವರಾಮಣ್ಣ ಎಂದೇ ಖ್ಯಾತರಾಗಿದ್ದ ಶಿವರಾಂ ಶನಿವಾರ ಖಾಸಗಿ ಆಸ್ಪತ್ರೆಯಲಗಲಿ ನಿಧನ ಹೊಂದಿದ್ದಾರೆ.
ಕೆಲವು ದಿನಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದರು. ನಂತರ ಮನೆಯಲ್ಲಿ ಅಯ್ಯಪ್ಪ ಪೂಜೆ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ತಲೆಗೆ ಗಂಭೀರ ಗಾಯವಾಗಿ ವಿದ್ಯಾಪೀಠ ಸರ್ಕಲ್ ಬಳಿಯ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬ್ರೇನ್ ಡ್ಯಾಮೇಜ್ ನಿಂದ ಕೋಮಾದಲ್ಲಿದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಹೊಸಕೆರೆಹಳ್ಳಿಯ ಖಾಸಗಿ ಆಸ್ಪತ್ರೆಯಿಂದ ಬನಶಂಕರಿಗೆ ಪಾರ್ಥಿವ ಶರೀರ ತೆಗೆದಕೊಂಡು ಬರಲಾಗಿದೆ. ಮನೆಯ ಬಳಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಅಂತ್ಯಕ್ರಿಯೆ ನಡೆಯಲಿದೆ.
ಶಿವರಾಂ ಅವರಿಗೆ 84 ವರ್ಷ ವಯಸ್ಸಾಗಿತ್ತು. ಆರು ದಶಕಗಳ ಕಾಲ ಕನ್ನಡ ಸಿನಿಮಾ ರಂಗದ ನಂಟುಹೊಂದಿದ್ದರು. ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಪಳಗಿದ ಶಿವರಾಂ ನಾಯಕ ನಟರಾಗಿ, ಹಾಸ್ಯನಟ, ಪೋಷಕ ನಟ, ನಿರ್ಮಾಪಕರಾಗಿಯೂ ಹೆಸರು ಮಾಡಿದವರು.
`ಶರಪಂಜರ’ ಶಿವರಾಂ ಎಂದೇ ಹೆಸರುವಾಸಿಯಾಗಿದ್ದರು `ಡ್ರೈವರ್ ಹನುಮಂತು’ ಸಿನಿಮಾದಲ್ಲಿ ನಾಯಕ ನಟರಾಗಿ ಹೆಚ್ಚು ಜನಪ್ರಿಯರಾಗಿದ್ದರು. ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಪ್ರಣಯರಾಜ ಶ್ರೀನಾಥ್ ಅವರ ಜೊತೆಯಲ್ಲಿ ನಟಿಸಿದ್ದರು.
ಶಿವರಾಂ ಅಯ್ಯಪ್ಪನ ಪರಮಭಕ್ತರಾಗಿದ್ದು, ಗುರುಸ್ವಾಮಿಯೂ ಆಗಿದ್ದರು. 48 ವರ್ಷಗಳಿಂದ ಶಬರಿಮಲೆಗೆ ಹೋಗಿ ಬರುತ್ತಿದ್ದರು. ಈ ಬಾರಿಯೂ ಹೋಗಬೇಕೆಂದು ಅಂದುಕೊಂಡಿದ್ದರು. ಆದರೆ ಇದೀಗ ಶಿವರಾಂ ಕನ್ನಡ ಸಿನಿಪ್ರಿಯರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಇಡೀ ಕನ್ನಡ ಚಿತ್ರರಂಗ ಸಹಿತ ಹಲವು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.