ಬೆಂಗಳೂರು: ಬೆಂಗಳೂರಿನ ರಸ್ತೆಗುಂಡಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ.
ತಂದೆ ಜೊತೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ 10 ವರ್ಷದ ಬಾಲಕ ಜೀವನ್ ರಸ್ತೆಗುಂಡಿಯಿಂದಾಗಿ ಮೃತಪಟ್ಟ ಕುರಿತು ಪ್ರತಿಕ್ರಿಯಿಸಿದ ಮೋಹನ್ ದಾಸರಿ, “ಆಡಳಿತಾರೂಢ ಬಿಜೆಪಿಯ ಭ್ರಷ್ಟಾಚಾರದಿಂದ ಸೃಷ್ಟಿಯಾಗಿದ್ದ ರಸ್ತೆ ಗುಂಡಿಗೆ ಮತ್ತೊಂದು ಜೀವ ಬಲಿಯಾಗಿದೆ. ಈಗ ಬಿಬಿಎಂಪಿಯು ರಸ್ತೆಗುಂಡಿಗಳ ಸಮೀಕ್ಷೆ ನಡೆಸಿ ಸುಮ್ಮನಾಗಬಹುದು ಎಂದು ಕಿಡಿಕಾರಿದರು.
ಇನ್ನು ಬಿಬಿಎಂಪಿ ಬಯಸಿದರೆ, ಗುಂಡಿಗಳಿಗೆ ಅಲಂಕಾರ ಮಾಡುವ ಮೂಲಕ ಸಮೀಕ್ಷೆಗೆ ಸಹಾಯ ಮಾಡಲು ಆಮ್ ಆದ್ಮಿ ಪಾರ್ಟಿ ಸಿದ್ಧವಿದೆ. ಬಿಬಿಎಂಪಿಯು ರಸ್ತೆಗುಂಡಿಗಳನ್ನು ಪತ್ತೆ ಹಚ್ಚುವ ಬದಲು ರಸ್ತೆ ನಿರ್ಮಿಸಿದ ಗುತ್ತಿಗೆದಾರ ಹಾಗೂ ಇಂಜಿನಿಯರ್‌ಗಳನ್ನು ಪತ್ತೆಹಚ್ಚಬೇಕಿದೆ. ಅವರ ವಿರುದ್ಧ ಕ್ರಮಕೈಗೊಂಡರೆ ಮಾತ್ರ ಈ ಸಮಸ್ಯೆ ಮರುಕಳಿಸುವುದು ತಪ್ಪುತ್ತದೆ” ಎಂದು ಹೇಳಿದರು.
“ಜೆಸಿಬಿ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪಕ್ಷಗಳು ಆಡಳಿತ ನಡೆಸಿದರೆ ರಸ್ತೆಗಳು ಕೂಡ ಜೆಸಿಬಿಯಲ್ಲಿ ಅಗೆದಂತೆ ಇರುತ್ತವೆ. ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಗೆ ಆದ್ಯತೆ ನೀಡುವ ಆಮ್ ಆದ್ಮಿ ಪಾರ್ಟಿಯಿಂದ ಮಾತ್ರ ಉತ್ತಮ ಗುಣಮಟ್ಟದ ಮೂಲ ಸೌಕರ್ಯಗಳನ್ನು ಜನರು ನಿರೀಕ್ಷಿಸಬಹುದು.
ಬಿಬಿಎಂಪಿ ಚುನಾವಣೆಯಲ್ಲಿ ಜಯಗಳಿಸಿದ ಕೆಲವೇ ದಿನಗಳಲ್ಲಿ ಆಮ್ ಆದ್ಮಿ ಪಾರ್ಟಿಯು ಬೆಂಗಳೂರಿನ ರಸ್ತೆಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ” ಎಂದು ಮೋಹನ್ ದಾಸರಿ ಹೇಳಿದರು.
“ಬಿಬಿಎಂಪಿಯಲ್ಲಿ ʻಹಳೇ ಕಲ್ಲು – ಹೊಸ ಬಿಲ್ಲುʼ ಮಾದರಿಯ ಆಡಳಿತವಿದ್ದು, ಇದಕ್ಕೆ ಅಂತ್ಯ ಹಾಡಲು ಜನರು ಕಟಿಬದ್ಧರಾಗಬೇಕಿದೆ. ಜಗತ್ತಿನ ಹಲವು ನಗರಗಳ ರಸ್ತೆಗಳು ಅತ್ಯುತ್ತಮವಾಗಿ ನಿರ್ವಹಣೆಯಾಗುತ್ತಿವೆ. ಭಾರೀ ಮಳೆ ಬಂದರೂ ಹಾಳಾಗದಂತಹ ರಸ್ತೆಗಳು ವಿವಿಧೆಡೆ ನಿರ್ಮಾಣವಾಗುತ್ತಿವೆ.
ಆದರೆ ಬೆಂಗಳೂರಿನ ರಸ್ತೆಗಳು ಮಾತ್ರ ದಿನದಿಂದ ದಿನಕ್ಕೆ ಕಳಪೆಯಾಗುತ್ತಿವೆ. ಭ್ರಷ್ಟ ಆಡಳಿತವು ಅಂತ್ಯವಾಗಿ, ಪ್ರಾಮಾಣಿಕ ಆಡಳಿತ ಬರುವವರೆಗೂ ಬೆಂಗಳೂರಿನ ರಸ್ತೆಗಳು ಸುಧಾರಣೆಯಾಗಲು ಸಾಧ್ಯವಿಲ್ಲ” ಎಂದು ಮೋಹನ್ ದಾಸರಿ ಹೇಳಿದರು.