ಮಡಿಕೇರಿ: ಮಡಿಕೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೆಲವರು ಘೇರಾವ್ ಹಾಕಿ ಕಾರಿಗೆ ಮೊಟ್ಟೆ ಹೊಡೆದರು. ಆದರೂ ಏನು ಕಾಣದಂತೆ ವರ್ತಿಸಿದ ಪೊಲೀಸ್ ಇಲಾಖೆ ವಿರುದ್ಧ ಇದೇ 26ರಂದು ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ.
ಗುರುವಾರ ನಡೆದ ಘಟನೆಯನ್ನು ಉಲ್ಲೇಖಿಸಿ ಕರ್ನಾಟಕದಲ್ಲಿ ರಾಜ್ಯ ಪೊಲೀಸ್ ಇಲಾಖೆಯು ಸಂಘ-ಪರಿವಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಸಿದ್ದರಾಮಯ್ಯ ಕೂಡ ದೂಷಿಸಿದ್ದರು.
ರಾಜ್ಯದ ಭಾರತೀಯ ಜನತಾ ಪಕ್ಷದ ಪುಂಡರ ಗೂಂಡಾಗಿರಿಗೆ ಅವಕಾಶ ನೀಡಿ, ಕೈಕಟ್ಟಿಕೊಂಡು ತಮಾಷೆ ನೋಡುವ ಪೊಲೀಸರ ಕರ್ತವ್ಯ ಲೋಪ ಖಂಡಿಸಿ ನಾವು ಆ.26ರಂದು ಕೊಡಗಿನ ಎಸ್.ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮುಸ್ಲಿಮರ ಏರಿಯಾದಲ್ಲಿ ಸಾವರ್ಕರ್ ಫ್ಲೆಕ್ಸ್ ಯಾಕೆ ಹಾಕಬೇಕು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ವಿರುದ್ಧ ಕಿಡಿಕಾರುತ್ತಿರುವ ಬಿಜೆಪಿ ಕಾರ್ಯಕರ್ತರು, ಮಡಿಕೇರಿಗೆ ಸಿದ್ದರಾಮಯ್ಯ ಆಗಮಿಸಿದ್ದ ವೇಳೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪ್ರಕರಣ ಸಂಬಂಧ 9 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದಾರೆ.
ಕಾರಿಗೆ ಮೊಟ್ಟೆ ಹೊಡೆದವರು ಯಾರು?: ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಹೊಡೆದಿದ್ದ ಮನು, ಕೃಷ್ಣಪ್ಪ, ಮಂಜುನಾಥ, ನಿತ್ಯಾನಂದ, ಪ್ರವೀಣ, ಗೌತಮ್, ಭಾಸ್ಕರ ನಾಯ್ಕ್, ಮಣಿಕಂಠ ಲಕ್ಷ್ಮೀ ನಾರಾಯಣ ಎಂಬವರನ್ನು ಕುಶಾಲನಗರ ಠಾಣಾ ಪೊಲೀಸರು ಬಂಧಿಸಿದ್ದರು.
ಕಳೆದ ಗುರುವಾರ ರಾತ್ರಿ ಕುಶಾಲನಗರ ಜೆಎಂಎಫ್ಸಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ ವೇಳೆ ಎಲ್ಲ ಆರೋಪಿಗಳಿಗೆ ಕೋರ್ಟ್ ಜಾಮೀನು ನೀಡಿದೆ.
ಗುಡ್ಡೆಹೊಸೂರು ಗ್ರಾಮದಲ್ಲಿ ಪ್ರತಿಭಟನೆ: ಮಡಿಕೇರಿಯಲ್ಲಿ ಮಳೆಯ ಅವಾಂತರಗಳಿಂದಾಗಿ ಅನೇಕ ನಷ್ಟ ಸಂಭವಿಸಿದ್ದು, ಇದನ್ನು ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಭೇಟಿ ಕೊಟ್ಟಿದ್ದರು. ಇದಕ್ಕೂ ಮುನ್ನ ಅವರು ನೀಡಿದ ಹೇಳಿಯಿಂದ ಕೆರಳಿದ ಬಿಜೆಪಿ ಕಾರ್ಯಕರ್ತರು ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಮದಲ್ಲಿ ಭಾರೀ ಪ್ರತಿಭಟನೆ, ಆಕ್ರೋಶವನ್ನು ಎದುರಿಸಿದರು. ಇದೇ ವೇಳೆ ಅವರ ಕಾರಿಗೆ ಮೊಟ್ಟೆಯನ್ನು ಎಸೆಯಲಾಯಿತು. ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ಸಿದ್ದರಾಮಯ್ಯ ಹೇಳಿಕೆಯಿಂದ ಕೆರಳಿಸಿದ್ದ ಬಿಜೆಪಿಗರು: ಸಾವರ್ಕರ್ ಫೋಟೋ ಹಾಕುವುದಕ್ಕೆ ಹೋಗಿರುವುದು ಎಲ್ಲಿ, ಅದು ಮುಸ್ಲೀಮರ ಏರಿಯಾದಲ್ಲಿ, ಎಲ್ಲಿ ಬೇಕಾದರೂ ಹಾಕಿಕೊಳ್ಳಲಿ ನಮ್ಮದೇನೂ ತಕರಾರು ಇಲ್ಲ. ಆದರೆ ಮುಸ್ಲೀಮರ ಏರಿಯಾದಲ್ಲೇ ಏಕೆ ಹಾಕಬೇಕಿತ್ತು. ಆಯ್ತು ಹಾಕಲಿ, ಆದರೆ ಟಿಪ್ಪು ಸುಲ್ತಾನ್ ಫೋಟೋ ಬೇಡ ಎಂದು ಹೇಳುವುದು ಏಕೆ?
ಸಾವರ್ಕರ್ ಫೋಟೋ ಹಾಕುವವರು ಟಿಪ್ಪು ಸುಲ್ತಾನ್ ಫೋಟೋ ಹಾಕುವುದಕ್ಕೂ ಬಿಡಬೇಕು. ಮೊದಲು ಕಿತಾಪತಿ ಮಾಡುವುದು ಇವರು, ಆ ಮೇಲೆ ಕಾಂಗ್ರೆಸ್ ವಿರುದ್ದ ಆರೋಪ ಮಾಡುವುದು ಇದೇ ಇವರ ನಡೆ ಎಂದು ಹೇಳಿದ್ದರು.