ಮುಂಬೈ: ಸರ್ಕಾರದೊಂದಿಗೆ ಎಂಎಸ್‌ಆರ್‌ಟಿಸಿ ನಿಗಮವನ್ನು ವಿಲೀನಗೊಳಿಸಬೇಕು ಎಂದು ಕಳೆದ ಎರಡೂವರೆ ತಿಂಗಳಿನಿಂದ ನೌಕರರು ಮುಷ್ಕರ ನಡೆಸುತ್ತಿದ್ದು, ಮಹಾರಾಷ್ಟ್ರದಲ್ಲಿ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ಈ ನಡುವೆ ಮತ್ತೆ ನೌಕರರು ಯಾವುದೇ ಭಯವಿಲ್ಲದೆ ಕೆಲಸಕ್ಕೆ ಮರಳಬೇಕು ಎಂದು ರಾಜ್ಯ ಸಾರಿಗೆ ಸಚಿವ ಅನಿಲ್ ಪರಬ್ ಹೇಳಿದ್ದಾರೆ. ಕೆಲಸಕ್ಕೆ ಮರಳುವ ನೌಕರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಎಸ್‌ಟಿ ಮುಷ್ಕರಕ್ಕೆ ಪರಿಹಾರ ಕಂಡುಕೊಳ್ಳಲು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಸಾರಿಗೆ ಸಚಿವ ಅನಿಲ್ ಪರಬ್ ಅವರೊಂದಿಗೆ ಎಂಎಸ್‌ಆರ್‌ಟಿಸಿ ನೌಕರರ ಕ್ರಿಯಾ ಸಮಿತಿಯ ಸಭೆ ನಡೆಸಲಾಗಿದ್ದು, ನಂತರ ಶರದ್ ಪವಾರ್ ನೌಕರರನ್ನು ಕೆಲಸಕ್ಕೆ ಮರಳುವಂತೆ ಮನವಿ ಮಾಡಿದ್ದಾರೆ.
“ಸರ್ಕಾರದ ನಿರ್ಧಾರದಲ್ಲಿನ ಕೆಲವು ದೋಷಗಳನ್ನು ಕ್ರಿಯಾ ಸಮಿತಿಯು ಸೂಚಿಸಿದ ನಂತರ ಸಾರಿಗೆ ಸಚಿವರು ಸಕಾರಾತ್ಮಕ ನಿರ್ಧಾರವನ್ನು ತೆಗೆದುಕೊಳ್ಳಲು ಸಿದ್ಧತೆಯನ್ನು ತೋರಿಸಿದ್ದಾರೆ. ಆದರೆ ಅದಕ್ಕೂ ಮೊದಲು ಎಸ್‌ಟಿ ಬಸ್‌ಗಳು ಪ್ರಾರಂಭವಾಗಬೇಕು, ನೌಕರರು ಕೆಲಸಕ್ಕೆ ಬರಬೇಕು” ಎಂದು ಪವಾರ್ ಹೇಳಿದ್ದಾರೆ.
ನೌಕರರು ಯಾವುದೇ ಭಯವಿಲ್ಲದೆ ಕೆಲಸಕ್ಕೆ ಮರಳಬೇಕು ಎಂದು ರಾಜ್ಯ ಸಾರಿಗೆ ಸಚಿವ ಅನಿಲ್ ಪರಬ್ ಹೇಳಿದ್ದಾರೆ. ಕೆಲಸಕ್ಕೆ ಮರಳುವ ನೌಕರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದು, ನೌಕರರು ಮಾತ್ರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಕಳೆದ ಎರಡೂವರೆ ತಿಂಗಳಿನಿಂದ ಮುಷ್ಕರ ಮುಂದುವರಿದಿರುವ ಕಾರಣ ತಿಳಿಯದವರಿಗೆ, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (MSRTC) ಚಾಟಿ ಬೀಸಿದೆ ಮತ್ತು 55,000 ಉದ್ಯೋಗಿಗಳಿಗೆ ಶೋಕಾಸ್ ನೋಟಿಸ್ ನೀಡಿದೆ. ಎಂಎಸ್‌ಆರ್‌ಟಿಸಿಯು ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಕ್ರಮವನ್ನು ಪ್ರಾರಂಭಿಸಿದೆ ಮತ್ತು ರಾಜ್ಯದಲ್ಲಿ ಬಸ್ ಸೇವೆಗಳಿಗಾಗಿ ನಿವೃತ್ತ ಉದ್ಯೋಗಿಗಳಿಗೂ ಸಹ ಗಾಳ ಹಾಕಿದೆ.
MSRTC 90,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈನಡುವೆ ಮುಷ್ಕರವನ್ನು ಹಿಂತೆಗೆದುಕೊಳ್ಳಲು ಮತ್ತು ಅವರು ಕೆಲಸಕ್ಕೆ ಮರಳಲು ಒಪ್ಪದಿರುವುದಕ್ಕೆ 1144 ಉದ್ಯೋಗಿಗಳನ್ನು ವಜಾಗೊಳಿಸಿದೆ ಮತ್ತು 11,024 ಜನರನ್ನು ಅಮಾನತುಗೊಳಿಸಿದೆ.
ರಾಜ್ಯ ಸರ್ಕಾರದೊಂದಿಗೆ ಎಂಎಸ್‌ಆರ್‌ಟಿಸಿ ವಿಲೀನದ ಬೇಡಿಕೆಯ ಸಮಸ್ಯೆಯು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ ಹೀಗಾಗಿ ಈಗ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಶರದ್ ಪವಾರ್, ಹೇಳಿದ್ದಾರೆ. ಹೀಗಾಗಿ ನೌಕರರು ತಮ್ಮ ಪಟ್ಟನ್ನು ಸಡಿಲಿಸದೆ ಮುಷ್ಕರವನ್ನು ಮುಂದುವರಿಸಿದ್ದಾರೆ.