ಬೆಂಗಳೂರು: ಬೆಂಗಳೂರಿನಿಂದ ಬಿಳಿಗಿರಿರಂಗನ ಬೆಟ್ಟ ಸಂರಕ್ಷಿತ ಅರಣ್ಯದ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗಕ್ಕೆ ರಾಜ್ಯ ಸರಕಾರ ಅನುಮತಿ ನೀಡಿದೆ.
ಕನಕಪುರ-ಮಳವಳ್ಳಿ-ಕೊಳ್ಳೇಗಾಲ-ಯಳಂದೂರು-ಈರೋಡ್ ಮೂಲಕ ಸೇಲಂಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಬಿಳಿಗಿರಿರಂಗನ ಬೆಟ್ಟ ಸಂರಕ್ಷಿತ ಅರಣ್ಯದಲ್ಲಿ 9 ಕಿಮೀ ಉದ್ದದ ಸುರಂಗ ಮಾರ್ಗ ಕೊರೆದು ಮಾರ್ಗ ಕಲ್ಪಿಸಲಾಗುವುದು. ಅರಣ್ಯ ನಾಶಕ್ಕೆ ಆಸ್ಪದ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಒಂದು ವೇಳೆ ಕೇಂದ್ರ ಪರಿಸರ ಸಚಿವಾಲಯದ ಅನುಮತಿ ಸಿಕ್ಕಿದರೆ ಇದು ರಾಜ್ಯದ ಅತಿ ದೊಡ್ಡ ಸುರಂಗ ರೈಲು ಮಾರ್ಗವಾಗಲಿದೆ. ಹಲವು ದಶಕಗಳ ಹಿಂದೆಯೇ ಬೆಂಗಳೂರು- ಮಂಗಳೂರು ರೈಲು ಮಾರ್ಗದಲ್ಲಿ ಹಲವು ಬೆಟ್ಟಗಳಡಿ ಸುರಂಗ ಕೊರೆದು ಸಂಪರ್ಕ ಕಲ್ಪಿಸಲಾಗಿತ್ತು. ಇದು ಕಾರ್ಯರೂಪಕ್ಕೆ ಬಂದರೆ ಚಾಮರಾಜನಗರ ಜಿಲ್ಲೆ ಬೆಂಗಳೂರಿಗೆ ಇನ್ನಷ್ಟೂ ಹತ್ತಿರವಾಗಲಿದೆ.
ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಅವರು ವಿಧಾನಸೌಧದಲ್ಲಿ ಮಾತನಾಡುತ್ತಾ ಕನಕಪುರದಿಂದ ತಮಿಳುನಾಡಿನ ಸೇಲಂಗೆ ಹೊಸ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೆ ಸಂಬಂಧಿಸಿದಂತೆ ಸರ್ವೇ ಕಾರ್ಯ ಆರಂಭಗೊಂಡಿದೆ ಎಂದು ತಿಳಿಸಿದ್ದಾರೆ.
ಸುರಂಗ ಮಾರ್ಗದಿಂದ ಅರಣ್ಯ ಪ್ರದೇಶಕ್ಕೆ ಧಕ್ಕೆ ?: ಚಾಮರಾಜನಗರ ಜಿಲ್ಲೆಯ ಯಳಂದೂರು ಹಾಗೂ ತಮಿಳುನಾಡಿನ ಈರೋಡ್ ನಡುವೆ ಅರಣ್ಯ ಪ್ರದೇಶ ಇರುವುದರಿಂದ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ನೆಲದಡಿ ಸುರಂಗ ಮಾರ್ಗದ ಮೂಲಕ 9 ಕಿ.ಮೀ.ಗಳಷ್ಟು ದೂರ ರೈಲು ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗುವುದು. ಕಾಡು ಉಳಿಸಲು ಮತ್ತು ಪರಿಸರಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಈ ಸುರಂಗ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.
ಈ ಸುರಂಗ ಕೂಡ ಅರಣ್ಯ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಸಾಗಲಿದೆ. ಯೋಜನೆ ಅನುಷ್ಠಾನಗೊಂಡ ನಂತರ ಈ ಮಾರ್ಗದಲ್ಲಿ ಸಂಚರಿಸುವವರಿಗೆ 62 ಕಿ.ಮೀ.ಗಳಷ್ಟು ದೂರ ಕಡಿಮೆಯಾಗಲಿದೆ ಎಂದು ವಿವರಿಸಿದರು.
ತಲ್ಲಚ್ಚೇರಿ- ಚಾಮರಾಜನಗರ ಮಾರ್ಗಕ್ಕೆ ಅನುಮತಿ ಇಲ್ಲ: ಕೇರಳದ ತಲಚ್ಚೇರಿಯಿಂದ ಚಾಮರಾಜನಗರವನ್ನು ಸಂಪರ್ಕಿಸುವ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸೋಮಣ್ಣ ತಿಳಿಸಿದ್ದಾರೆ.
ಈ ಮಾರ್ಗದಲ್ಲಿ ನಾಗರಹೊಳೆ ಮತ್ತು ಬಂಡೀಪುರ ಸಂರಕ್ಷಿತ ಅರಣ್ಯ ಪ್ರದೇಶದ 22 ಕಿ.ಮೀ. ಉದ್ದದಷ್ಟು ರೈಲ್ವೆ ಸುರಂಗ ಮಾರ್ಗವನ್ನು ನಿರ್ಮಿಸಲು ಕೇರಳ ಸರ್ಕಾರ ಯೋಜನೆ ರೂಪಿಸಿ ಕೇಂದ್ರದ ಅನುಮತಿ ಕೋರಿದೆ ಆದರೆ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಇಷ್ಟು ಬೃಹತ್ ಗಾತ್ರದ ಸುರಂಗ ಮಾರ್ಗ ನಿರ್ಮಿಸುವುದು ಸುರಕ್ಷಿತವಲ್ಲ. ಹಾಗೊಂದು ವೇಳೆ ಇದರ ನಿರ್ಮಾಣಕ್ಕೆ ಅನುಮತಿ ನೀಡಿದರೆ ಅರಣ್ಯ ಪ್ರದೇಶ ಹಾಗೂ ವನ್ಯಜೀವಿಗಳಿಗೆ ಹಾನಿಯಾಗುತ್ತದೆ ಎಂದು ಹೇಳಿದರು.
ಇಂತಹ ಸುರಂಗ ನಿರ್ಮಿಸುವ ಮೂಲಕ ಅರವತ್ತರಿಂದ 70 ಕಿಲೋಮೀಟರುಗಳಷ್ಟು ಅಂತರ ಕಡಿಮೆಯಾಗಲಿದೆ ಎಂಬುದು ಕೇರಳದ ವಾದ. ಆದರೆ, ಇಂತಹ ಸಂರಕ್ಷಿತ ಅರಣ್ಯವನ್ನು ಕಳೆದುಕೊಂಡರೆ ಪುನಃ ಅದನ್ನು ಬೆಳೆಸುವುದು ಅಸಾಧ್ಯ. ಹೀಗಾಗಿ ಕೇರಳ ಸರ್ಕಾರದ ಪ್ರಸ್ತಾವನೆಗೆ ಅಂಗೀಕಾರ ನೀಡದೆ ಇರಲು ನಾವು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕೇರಳದಿಂದ ಮೇಲ್ಮನವಿ ?: ಒಂದು ವೇಳೆ ಬೆಂಗಳೂರಿನಿಂದ ಚಾಮರಾಜನಗರದ ಅರಣ್ಯ ಮಾರ್ಗವಾಗಿ ತಮಿಳುನಾಡಿಗೆ ರೈಲ್ವೆ ಸುರಂಗ ಮಾರ್ಗಕ್ಕೆ ಅನುಮತಿ ನೀಡಿದರೆ ಮುಂದೆ ಇಂತಹ ಇನ್ನಷ್ಟು ಪ್ರಸ್ತಾವಗಳು ಹರಿದುಬರುವ ನಿರೀಕ್ಷೆ ಇದೆ. ತಮಿಳುನಾಡು ಮಾರ್ಗಕ್ಕೆ ಅನುಮತಿ ನೀಡಿದಂತೆ ತನಗೂ ಅನುಮತಿ ನೀಡುವಂತೆ ಕೇರಳ ಸರಕಾರ ಸುಪ್ರೀಂ ಕೋರ್ಟ್ ಕದ ತಟ್ಟುವ ನಿರೀಕ್ಷೆ ಇದೆ.