ಕೇರಳ: ಪುರುಷನಿಗೆ ಈಗಾಗಲೇ ವಿವಾಹವಾಗಿದೆ ಎಂದು ಮಹಿಳೆಗೆ ತಿಳಿದಿದ್ದರೂ, ಆತ ನೀಡಿದ ಮದುವೆಯ ಸುಳ್ಳು ಭರವಸೆಯ ಮೇಲೆ ಲೈಂಗಿಕ ಸಂಬಂಧ ಮುಂದುವರಿಸಿದ್ದರೆ, ಅಂತಹ ಅತ್ಯಾಚಾರ ಆರೋಪವನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.
ಅಂತಹಜೋಡಿಗಳ ನಡುವಿನ ಯಾವುದೇ ಲೈಂಗಿಕ ಸಂಬಂಧವನ್ನು ಪ್ರೀ ತಿ ಹಾಗೂ ಭಾವೋದ್ರೇಕ ಎಂದು ಮಾತ್ರ ಕರೆಯಬಹುದು. ಇಂತಹ ಸಂಬಂಧಗಳು ಮದುವೆಯಾಗುವ ಯಾವುದೇ ಸುಳ್ಳು ಭರವಸೆಯನ್ನು ಆಧರಿಸಿಲ್ಲ ಎಂದು ನ್ಯಾಯಮೂರ್ತಿ ಕೌಸರ್ ಎಡಗ್ಗಪತ್ ಅವರಿದ್ದ ಏಕಸದಸ್ಯ ಪೀಠವು ತಿಳಿಸಿದೆ.
4ನೇ ಪ್ರತಿವಾದಿಯು 2010ರಿಂದ ಅರ್ಜಿದಾರರೊಂದಿಗೆ ಸಂಬಂಧ ಹೊಂದಿದ್ದಾಳೆ. 2013ರಿಂದ ಅವನ ಮದುವೆಯ ಬಗ್ಗೆ ತಿಳಿದ ಮೇಲೂ ಸಂಬಂಧ ಮುಂದುವರಿಸಿದ್ದಾಳೆ ಎಂದು ಒಪ್ಪಿಕೊಂಡಿದ್ದಾರೆ. ಆದ್ದರಿಂದ, ಮದುವೆಯಾಗುವ ಸುಳ್ಳು ನೆಪದಲ್ಲಿ ಲೈಂಗಿಕ ಸಂಭೋಗ ನಡೆಸಿರುವ ಆರೋಪ ಸ್ವೀಕಾರಾರ್ಹವಲ್ಲ. ಆಪಾದಿತ ಲೈಂಗಿಕ ಸಂಬಂಧದಲ್ಲಿ ಅರ್ಜಿದಾರರ ಪ್ರೀತಿ ಮತ್ತು ಭಾವೋದ್ರೇಕ ಮಾತ್ರ ಎಂದು ಕರೆಯಬಹುದು ನ್ಯಾಯಾಲಯವು ತಿಳಿಸಿರುವುದಾಗಿ ಮಾಧ್ಯಮಗಳು ವರದಿಮಾಡಿವೆ.
ಮಹಿಳೆಯನ್ನು ಮದುವೆಯಾಗುವ ತನ್ನ ಭರವಸೆಯನ್ನು ವ್ಯಕ್ತಿಯು ಹಿಂತೆಗೆದುಕೊಂಡರೆ, ನಂತರ ಅವರು ಹೊಂದಿದ್ದ ಸಮ್ಮತಿಯ ಲೈಂಗಿಕತೆಯು ಐಪಿಸಿಯ ಸೆಕ್ಷನ್ 376ರ ಅಡಿಯಲ್ಲಿ ಅತ್ಯಾ ಚಾರದ ಅಪರಾಧವಾಗುವುದಿಲ್ಲ ಎಂಬುದನ್ನು ನ್ಯಾಯಾಲಯ ಪುನರುಚ್ಛರಿಸಿದೆ.
ಐಪಿಸಿ ಸೆಕ್ಷನ್ 406 (ನಂಬಿಕೆಯ ಉಲ್ಲಂಘನೆ), 420 (ವಂಚನೆ) ಮತ್ತು 376 (ಅತ್ಯಾಚಾರ) ಶಿಕ್ಷಾರ್ಹ ಅಪರಾಧಗಳ ಅಡಿಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರ ಕರಣವನ್ನು ರದ್ದುಗೊಳಿಸುವಂತೆ ವ್ಯಕ್ತಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶವನ್ನು ನೀಡಿದೆ.
ಒಂಬತ್ತು ವರ್ಷಗಳ ಅವಧಿಯಲ್ಲಿ , ಅರ್ಜಿದಾರರು, ದೂರುದಾರರಿಗೆ ಮದುವೆಯ ಸುಳ್ಳು ಭರವಸೆ ನೀಡಿ, ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಸ್ಥಳಗಳಲ್ಲಿ ಅವಳೊಂದಿಗೆ ಲೈಂಗಿಕ ಸಂಭೋಗ ನಡೆಸಿದ್ದಾರೆ ಎಂಬುದು ಪ್ರತಿವಾದಿಗಳ ಆರೋಪವಾಗಿತ್ತು.
ದೂರುದಾರರ ಹೇಳಿಕೆಯು 2010ರಿಂದ ಸಂತ್ರಸ್ತೆ ಮತ್ತು ಆರೋಪಿಗೆ ಪರಸ್ಪರ ಸಂಬಂಧವಿತ್ತು ಎಂಬುದನ್ನು ಬಹಿರಂಗಪಡಿಸಿದೆ. ಆರೋಪಿ ವಿವಾಹಿತ ಎನ್ನುವುದನ್ನು ದೂರುದಾರರು ಐದಾರು ವರ್ಷಗಳ ಹಿಂದೆಯೇ ತಿಳಿದುಕೊಂಡಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ. ಆದರೂ, 2019ರವರೆಗೆ ಆತನೊಂದಿಗೆ ಮಹಿಳೆ ಲೈಂಗಿಕ ಸಂಬಂಧಹೊಂದಿದ್ದಳು ಎಂಬುದನ್ನು ಗಮನಿಸಿದ ನ್ಯಾಯಾಲಯವು ಅಂತಿಮವಾಗಿ ಆರೋಪಿ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದು ಗೊಳಿಸಲು ಆದೇಶ ಹೊರಡಿಸಿದೆ.