ಬೀದರ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಬೀದರ್ ತಂಡದ ಗೌರವಾಧ್ಯಕ್ಷ ವಿಜಯಕುಮಾರ ಸೋನಾರೆ ಅವರ ನೇತೃತ್ವದಲ್ಲಿ ಬೀದರ್ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣ ಗೌಡಗೇರಿ ಅವರನ್ನು ಭೇಟಿ ಮಾಡಿ ನೌಕರರ ಸಮಸ್ಯೆ ನಿವಾರಿಸುವಂತೆ ಮನವಿ ಸಲ್ಲಿಸಲಾಯಿತು.
ಶನಿವಾರ ಬೆಳಗ್ಗೆ ಡಿಸಿ ಕಚೇರಿಯಲ್ಲಿ ಭೇಟಿ ಮಾಡಿದ ಕೂಟದ ಪದಾಧಿಕಾರಿಗಳು, ಮುಖ್ಯವಾಗಿ ಬೀದರ ಕೇಂದ್ರ ಬಸ್ ನಿಲ್ದಾಣದ ಮೇಲೆ ಇದ್ದ ಹಳೆಯ ವಿಭಾಗೀಯ ಕಚೇರಿಯ ಸ್ಥಳವನ್ನು ಕೇಂದ್ರ ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆ ತಂಗುವ ಚಾಲನಾ ಸಿಬ್ಬಂದಿಗಳಿಗಾಗಿ, ಕಲಬುರಗಿಯ ಕೆಂದ್ರ ಬಸ್ ನಿಲ್ದಾಣದ ಮಾದರಿಯಲ್ಲಿ ಸಿಬ್ಬಂದಿ ವಿಶ್ರಾಂತಿ ಗೃಹವನ್ನಾಗಿ ನಿರ್ಮಿಸುವಂತೆ ಕೋರಿದರು.
ಈ ವಿಷಯವಾಗಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ನಿಗಮದ ಬೀದರ್ ವಿಬಾಗದ ಎಲ್ಲ ಘಟಕದ ಒಳಗಡೆ ಮೂಲಭೂತ ಸೌಕರ್ಯಗಳಿರುವಂತೆ ಸುಸಜ್ಜೀತವಾದ ವಿಶ್ರಾಂತಿ ಕೊಣೆಗಳು ಇದ್ದು ಅಲ್ಲಿ ಕರ್ತವ್ಯ ನಿರತ ಚಾಲನಾ ಸಿಬ್ಬಂದಿಗಳು ರಾತ್ರಿ ವೇಳೆಯಲ್ಲಿ ವಿಶ್ರಾಂತಿ ಮಾಡಲು ಅನುಕೂಲ ಇದೆ. ಅಲ್ಲೇ ವಿಶ್ರಾಂತಿ ಪಡೆಯುವ ವ್ಯವಸ್ಥೆ ಮಾಡಿಸಲಾಗುವುದು ಎಂದು ಹೇಳಿದರು.
ಮುಂದುವರಿದು ನಿಗಮದ ಭದ್ರತಾ ಇಲಾಖೆಗೆ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಘಟಕದ ವಿಶ್ರಾಂತಿ ಕೋಣೆಯಲ್ಲಿ ರಾತ್ರಿ ವಿಶ್ರಾಂತಿ ಮಾಡಲು ಅನುವು ಮಾಡಿಕೊಡುವಂತೆ ನಿರ್ದೇಶಿಸಲಾಗುವುದೆಂದು ತಿಳಿಸಿದರು. ಈ ವ್ಯವಸ್ಥೆ ವಿಭಾಗದ ಎಲ್ಲ ಘಟಕಗಳಲ್ಲಿ ಮಾಡಲಾಗುವುದೆಂದು ಭರವಸೆ ನೀಡಿದರು.
ಇನ್ನು ಕಳೆದ ಸೆ.30 ರಂದು ಆಡಳಿತಾತ್ಮಕ ಮೇರೆಗೆ ವಿಭಾಗದ ಇತರ ಘಟಕಗಳಿಗೆ ವರ್ಗಾವಣೆ ಗೊಂಡ ಸಿಬ್ಬಂದಿಗಳಲ್ಲಿ ಕೆಲವರಿಗೆ ಅನಾನೂಕೂಲ ವಾಗಿದ್ದನ್ನು ಸಂಘವು ಮನವರಿಕೆ ಮಾಡಿದ್ದು ಹಂತ ಹಂತವಾಗಿ ವರ್ಗಾವಣೆಯಿಂದ ಅನಾನೂಕೂಲ ಆದವರಿಗೆ ಅನುಕೂಲ ಮಾಡಿಕೊಡುವುದಗಾಗಿ ಹೇಳಿದರು.
ಗೈರು ಹಾಜರಿಯಾದ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಕ್ತ ಸಲಹೆ ಸೂಚನೆ ನೀಡಿ ಎಲ್ಲ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ನೋಡಿಕೊಳ್ಳಲು ಕೂಟವು ಸಹಕರಿಸುವಂತೆ ತಿಳಿಸಿದರು.
ಕರಾರಸಾ ನೌಕರರ ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಚಾಮರಡ್ಡಿ, ಪ್ರಧಾನ ಕಾಯದರ್ಶಿ ಜಗನ್ನಾಥ ವಿ ಶಿವಯೋಗಿ, ಉಪಾಧ್ಯಕ್ಷ ಶಾಂತು ದೆಸೊಳೆ ಹಾಗೂ ನೌಕರರ ಕೂಟದ ಇರತ ಸದಸ್ಯರು ಇದ್ದರು.